

ಮಂಡ್ಯ: ಕರ್ನಾಟಕ ಸಂಘ, ವೆಂಕಟೇಶ್ವರ ಚಾರಿಟಬಲ್ ಟ್ರಸ್ಟ್ ಮತ್ತು ನಾಗರಿಕ ವೇದಿಕೆ ವತಿಯಿಂದ ಅನಿವಾಸಿ ಭಾರತೀಯ ಸಾಧಕ ಡಾ.ಎಲ್.ಎನ್.ಮೂರ್ತಿ ಹಲ್ಲೇಗೆರೆ ಅವರನ್ನು ಆ.19ರಂದು ಸನ್ಮಾನಿಸಲಾಗುವುದು ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್‌ಗೌಡ ತಿಳಿಸಿದರು.
ಅನಿವಾಸಿ ಭಾರತೀಯ ಹಾಗೂ ಅಮೆರಿಕಾದ ಸ್ಕೋಪ್ ಆಫ್ ಫೌಂಡೇಶನ್ ಸಂಸ್ಥಾಪಕ ಡಾ.ಎಲ್.ಎನ್.ಮೂರ್ತಿ ಹಾಗೂ ಅವರ ಕುಟುಂಬ ಸದಸ್ಯರು ಅಮೆರಿಕಾದಲ್ಲಿ ಸ್ಕೋಪ್ ಆಫ್ ಫೌಂಡೇಶನ್ಸಂ ಸ್ಥೆ ಸ್ಥಾಪಿಸಿದ್ದಾರೆ. ತಮ್ಮ ಸಂಸ್ಥೆಯ ಮೂಲಕ ಮಾತೃಭೂಮಿಯ ಋಣವನ್ನು ತೀರಿಸುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಆಧ್ಯಾತ್ಮಿಕ ಕೇಂದ್ರವಾಗಿ ’ಭೂದೇವಿ ಆಧ್ಯಾತ್ಮಿಕ ಕೇಂದ್ರ’ (ಮದರ್ ಅರ್ಥ್) ಯೋಜನೆಯನ್ನು ತಮ್ಮ ಹುಟ್ಟೂರು ಮಂಡ್ಯ ತಾಲೂಕಿನ ಹಲ್ಲೇಗೆರೆಯಲ್ಲಿ ಪ್ರಾರಂಭಿಸಲು ಮುಂದಾಗಿದ್ದಾರೆ. ಸುಮಾರು 70 ಕೋಟಿ ರೂ ವೆಚ್ಚದಲ್ಲಿ ತಮ್ಮ 12 ಎಕರೆ ಜಮೀನಿನಲ್ಲಿ ಈ ಯೋಜನೆ ಜನ್ಮ ತಳೆಯಲಿದೆ. ಈ ಹಿನ್ನಲೆಯಲ್ಲಿ ಅಂದು ಸಂಜೆ 4 ಗಂಟೆಗೆ ನಗರದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಅವರಿಗೆ ನಾಗರಿಕ ಸನ್ಮಾನ ಮಾಡುತ್ತಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ರವಿಕುಮಾರ್ ಗಣಿಗ ವಹಿಸಲಿದ್ದು, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಹಾಗೂ ಮಾಜಿ ಶಾಸಕ ಎಂ.ಶ್ರೀನಿವಾಸ್ ಡಾ.ಎಲ್.ಎನ್.ಮೂರ್ತಿ ಹಲ್ಲೇಗೆರೆ ಅವರನ್ನು ಸನ್ಮಾನಿಸಲಿದ್ದು, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ಅಭಿನವ ಭಾರತಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಶಿವಮೂರ್ತಿ ಕೀಲಾರ, ವಂದೇ ಭಾರತಂ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಬಿಜ್ಜವರ ಎಚ್. ಲೋಕೇಶ್, ಹನಕೆರೆ ಎಂ.ಶ್ರೀನಿವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಿ.ಶಿವರಾಜು ಕೀಲಾರ, ನೇಗಿಲ ಯೋಗಿ ಸಂಸ್ಥೆಯ ಅಧ್ಯಕ್ಷ ಎ.ಸಿ. ರಮೇಶ್ ಭಾಗವಹಿಸಲಿದ್ದಾರೆ. ಸಂಜೆ 4 ಗಂಟೆಯಿಂದ ನಾಡಿನ ಸುಪ್ರಸಿದ್ಧ ಗಾಯಕರಾದ ಡಾ.ರಾಮೇಶ್ವರಪ್ಪ, ವಿಶ್ವೇಶ ಭಟ್, ಅಶ್ವಿನಿ ಭಟ್, ಶಶಿಕಲಾ ಸುನಿಲ್, ಶ್ರೀಧರ್, ವೀಣಾ ಶಿವಣ್ಣ ರವರಿಂದ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ನಾಗರಿಕ ವೇದಿಕೆಯ ಎ.ಸಿ.ರಮೇಶ್, ಡಿ. ಶಿವರಾಜು ಕೀಲಾರ, ಮಂಜೇಶ್, ಹನಕೆರೆ ನಾಗಪ್ಪ, ಕಾರಸವಾಡಿ ಮಹದೇವು ಉಪಸ್ಥಿತರಿದ್ದರು.