

ಮಂಡ್ಯ: ಕರ್ನಾಟಕ ಸಂಘದಿಂದ ಕೊಡಮಾಡುವ ಪ್ರಭಾವತಿ ಮತ್ತು ಎಚ್.ಹನುಮೇಗೌಡ ಕಾನೂನು ಸೇವಾ ಪ್ರಶಸ್ತಿಗೆ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ರಾಮಪುರದ ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ, ಶಾರದಮ್ಮ ಮತ್ತು ಎಂ.ಎಲ್.ಸುಬ್ಬಣ್ಣ ಕೃಷಿ ಪ್ರಶಸ್ತಿಗೆ ರಾಮನಗರ ಜಿಲ್ಲೆ ಕನಕಪುರ ತಾಲೂಕು ಹೊನ್ನಗಾನಹಳ್ಳಿಯ ಎಚ್.ಕೆ.ಶ್ರೀಕಂಠ ಆಯ್ಕೆಯಾಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಸಂಘದ ನಿರ್ದೇಶಕ ಜಯರಾಂ ಕೋಣನಹಳ್ಳಿ, ಡಿ.3ರಂದು ನಗರದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಇಬ್ಬರಿಗೂ ತಲಾ 20 ಸಾವಿರ ರೂ ನಗದಿನ ಜತೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.
ಅಂದು ಬೆಳಗ್ಗೆ 11ಗಂಟೆಗೆ ಆಯೋಜಿಸಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ವಹಿಸಲಿದ್ದು, ಹೈಕೋರ್ಟ್ ನ್ಯಾಯಮೂರ್ತಿ ಇ.ಎಸ್.ಇಂದ್ರೇಶ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅಂತೆಯೇ ಪ್ರಶಸ್ತಿ ದಾನಿಗಳ ಕುಟುಂಬದವರು ಪಾಲ್ಗೊಳ್ಳಿದ್ದಾರೆಂದು ತಿಳಿಸಿದರು.
ಕರ್ನಾಟಕ ಸಂಘದ ಕಾರ್ಯದರ್ಶಿ ಲೋಕೇಶ್ ಚಂದಗಾಲು, ನಿರ್ದೇಶಕರಾದ ವಿಜಯಲಕ್ಷ್ಮೀ ರಘುನಂದನ್, ಸೋಮಶೇಖರ್, ಬಾಲಕೃಷ್ಣ ಇದ್ದರು.