ಅ.29 ಮತ್ತು 30ರಂದು ನಗರದಲ್ಲಿ ವಿಚಾರ ಸಂಕಿರಣ: ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾಹಿತಿ

Karnataka Association press conference Mandya
Published on

ಮಂಡ್ಯ: ಕರ್ನಾಟಕ ಸಂಘ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಮಂಡ್ಯ ವಿಶ್ವವಿದ್ಯಾಲಯ, ಪಟೇಲ್ ಚಾರಿಟಬಲ್ ಟ್ರಸ್ಟ್‌ನ ಆಶ್ರಯದಲ್ಲಿ ಅ.29 ಮತ್ತು 30ರಂದು ನಗರದಲ್ಲಿ ಗಾಂಧಿ ಎಂಬ ವರ್ತಮಾನ ವಿಷಯ ಕುರಿತಂತೆ ಎರಡು ದಿನದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ತಿಳಿಸಿದರು.

ಕರ್ನಾಟಕ ಸಂಘದ ಆವರಣದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ 29ರಂದು ಬೆಳಗ್ಗೆ 10ಕ್ಕೆ ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಡಾ.ಪುಟ್ಟರಾಜು ಅಧ್ಯಕ್ಷತೆಯಲ್ಲಿ ಕರ್ನಾಟಕ ಜಲಸಾರಿಗೆ ನಿಗಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಂ ರಾಯಪುರ ವಿಚಾರ ಸಂಕಿರಣ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಕಾರ್ಯಾಧ್ಯಕ್ಷ ಎನ್.ಆರ್.ವಿಶುಕುಮಾರ್ ಭಾಗವಹಿಸಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಮಧ್ಯಾಹ್ನ 2ರಿಂದ ಗಾಂಧೀಜಿ ಮತ್ತು ಶಿಕ್ಷಣ ವಿಷಯದ ಬಗ್ಗೆ ರಾಜ್ಯ ಸಂಪನ್ಮೂಲ ಕೇಂದ್ರದ ನಿವೃತ್ತ ನಿರ್ದೇಶಕ ಡಾ.ಎಸ್.ತುಕಾರಾಂ, ಗಾಂಧೀಜಿ ಮತ್ತು ಖಾದಿ ವಿಷಯದ ಬಗ್ಗೆ ಕಲಾವಿದ, ಬರಹಗಾರ ಕೆ.ಜೆ.ಸಜ್ಜಿದಾನಂದ, ಅಸ್ಪೃಶ್ಯತೆ: ಗಾಂಧೀಜಿ ಮತ್ತು ಅಂಬೇಡ್ಕರ್-ಒಂದು ಅನುಸಂಧಾನ ಕುರಿತು ತುಮಕೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ನಿತ್ಯಾನಂದ ಬಿ.ಶೆಟ್ಟಿ ವಿಷಯ ಮಂಡನೆ ಮಾಡಲಿದ್ದಾರೆ ಎಂದು ಹೇಳಿದರು.

30ರಂದು ಬೆಳಗ್ಗೆ 10 ಗಂಟೆಗೆ ಗಾಂಧೀಜಿ ಅವರ ಕನಸಿನ ಭಾರತ ಮತ್ತು ವರ್ತಮಾನ ವಿಚಾರವಾಗಿ ಗೌರಿಬಿದನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ರಮೇಶ್‌ಚಂದ್ರ ದತ್ತ, ಗಾಂಧೀಜಿ ಓದು ಮತ್ತು ಬರಹಗಳು ವಿಷಯದ ಬಗ್ಗೆ ಚಿಂತಕ ಡಾ.ಕೆ.ಪಿ.ಸುರೇಶ್, ಗಾಂಧೀಜಿ ಮತ್ತು ಅಹಿಂಸೆ ವಿಷಯ ಕುರಿತು ನಿವೃತ್ತ ಪ್ರಾಧ್ಯಾಪಕ ಡಾ.ಮುರಳೀಧರ್, ಗಾಂಧೀಜಿ ಮತ್ತು ತಾಯ್ತನ ವಿಷಯದ ಬಗ್ಗೆ ಕವಯತ್ರಿ ಡಾ.ಶುಭಶ್ರೀ ಪ್ರಸಾದ್, ಗಾಂಧೀಜಿ ನಾವೇಕೆ ತಿಳಿಯಬೇಕು ಎಂಬುದರ ಬಗ್ಗೆ ನಿವೃತ್ತ ಪ್ರಾಧ್ಯಾಪಕ ಪ್ರೊ.ಜಿ.ಬಿ.ಶಿವರಾಜು ವಿಷಯ ಮಂಡನೆ ಮಾಡಲಿದ್ದಾರೆ ಎಂದು ವಿವರಿಸಿದರು.

ಸಂಜೆ 3.30ಕ್ಕೆ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಅಧ್ಯಕ್ಷತೆಯಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ.ಕೃಷ್ಣ ಸಮಾರೋಪ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎಂ.ಶ್ರೀನಿವಾಸ್, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಕಾರ್ಯದರ್ಶಿ ಎಂ.ಸಿ.ನರೇಂದ್ರ ಪಾಲ್ಗೊಳ್ಳುವರು ಎಂದರು,

ಜಿಲ್ಲಾ ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ಮುಖ್ಯ ಆಯುಕ್ತ ಭಕ್ತವತ್ಸಲ, ತರಬೇತುಗಾರ್ತಿ ಲತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net