ರಾಜ್ಯದಲ್ಲಿ ಭ್ರಷ್ಟಾಚಾರ, ದುರಾಡಳಿತ ತಾಂಡವ: ಕೆಆರ್‌ಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ದೀಪಕ್ ಟೀಕೆ

Karnataka Rashtra Samithi Party press conference Mandya
Published on

ಮಂಡ್ಯ: ಭ್ರಷ್ಟಾಚಾರ, ದುರಾಡಳಿತದಿಂದ ಕೂಡಿದ ರಾಜ್ಯ ಸರ್ಕಾರ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿಕೊಂಡು ತಮ್ಮ ಗ್ಯಾರೆಂಟಿ ಯೋಜನೆಗಳ ಸುತ್ತ ಗಿರಕಿ ಹೊಡೆಯುತ್ತಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎನ್.ದೀಪಕ್ ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಅಗತ್ಯ ವಸ್ತುಗಳು, ಸರ್ಕಾರಿ ಸೇವಾ ಶುಲ್ಕಗಳು ಏರಿಕೆ ಮಾಡಿರುವುದು ಸರ್ಕಾರದ ಬೊಕ್ಕಸ ಖಾಲಿಯಾಗಿ ಎಂಬುದನ್ನು ತೋರುತ್ತದೆ. ಗ್ಯಾರೆಂಟಿಗೆ ಹಣ ಹೊಂದಿಸಲು ನಿರಂತರ ಬೆಲೆ ಏರಿಕೆಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ಬೆಲೆ ಏರಿಕೆ ಮಾಡಿಕೊಂಡು 4 ಲಕ್ಷ ಕೋಟಿ ರೂ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಜನರಿಗೆ ವಂಚಿಸುತ್ತಿದ್ದಾರೆ. ಅಭಿವೃದ್ಧಿ ಹಾಗೂ ಸಣ್ಣ ಕಾಮಗಾರಿಗಳಿಗೂ ಹಣ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅನುದಾನದ ಕೊರತೆಯಿಂದಾಗಿ ಶಾಸಕರು ಪರ್ಸೆಂಟೇಜ್ ಸಿಗದೆ ಪರದಾಡುತ್ತಿದ್ದಾರೆ. ಸರ್ಕಾರಿ ಕಚೇರಿ ವಸೂಲಿ ಕೇಂದ್ರವಾಗಿವೆ. ಅಕ್ರಮ ಮರಳು ಗಣಿಗಾರಿಕೆ, ಕ್ರಷರ್‌ಗೆ ಕಡಿವಾಣ ಹಾಕಲು ಸರ್ಕಾರಕ್ಕೆ ಸಾಧ್ಯವಾಗದೇ ನಿರಂತರ ಲೂಟಿ ನಡೆಯುತ್ತಿದೆ ಎಂದು ಆರೋಪಿಸಿದರು.

ಸಚಿವರಿಗೆ ರಾಜ್ಯದ ಅಭಿವೃದ್ಧಿ, ಜನಪರ ಕಾಳಜಿಯೇ ಇಲ್ಲ. ಸರ್ಕಾರ ಕೂಡಲೇ ಭಷ್ಟಾಚಾರ, ದುರಾಡಳಿತವನ್ನು ನಿಲ್ಲಿಸಿದೇ ಹೋದಲ್ಲಿ ತಮ್ಮ ಗ್ಯಾರೆಂಟಿಯನ್ನೂ ನಿಲ್ಲಿಸುವ ಸ್ಥಿತಿಗೆ ತಲುಪಲಿದೆ. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಕ್ರಮ ವಹಿಸುವ ಮೂಲಕ ತಕ್ಷಣವೇ ಬೆಲೆ ಏರಿಕೆ ಹಿಂಪಡೆಯಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾ ಉಸ್ತುವಾರಿ ರಮೇಶ್‌ಗೌಡ, ಮಲ್ಲೇಶ್, ಕಾಂತರಾಜು, ಶಶಿಧರ್, ರವೀಂದ್ರ, ಜಯಪ್ರಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net