ಸೌಜನ್ಯ ಪ್ರಕರಣ ಮರುತನಿಖೆಗೆ ಒತ್ತಾಯಿಸಿ ಆ.26ರಿಂದ ಪಾದಯಾತ್ರೆ: ಕೆಆರ್‌ಎಸ್ ಉಪಾಧ್ಯಕ್ಷ ಎಸ್.ಎಚ್.ಲಿಂಗೇಗೌಡ ಮಾಹಿತಿ

2
Published on

ಮಂಡ್ಯ: ಸೌಜನ್ಯ ಮತ್ತು ಆಕೆಯ ಕುಟುಂಬಕ್ಕೆ ನ್ಯಾಯ ಸಿಗಲಿ ಮತ್ತು ಅಪರಾಧ ಕೃತ್ಯ ಎಸಗಿದವರನ್ನು ಪತ್ತೆ ಮಾಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬೆಳ್ತಂಗಡಿಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಲಾಗುವುದು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಉಪಾಧ್ಯಕ್ಷ ಎಸ್.ಎಚ್.ಲಿಂಗೇಗೌಡ ತಿಳಿಸಿದರು.

ಸೌಜನ್ಯ ಸಾವಿನ ಪ್ರಕರಣದಲ್ಲಿ ಇಲ್ಲಿಯವರೆಗೂ ಯಾರಿಗೂ ಶಿಕ್ಷೆ ಆಗಿಲ್ಲ. ಪೊಲೀಸರಿಂದ ಆರೋಪಿ ಎಂದು ಹೇಳಲ್ಪಟ್ಟಿದ್ದ ಸಂತೋಷ್‌ರಾವ್ ಎನ್ನುವ ವ್ಯಕ್ತಿಯನ್ನು ನ್ಯಾಯಾಲಯ ಆರೋಪಮುಕ್ತ ಮಾಡಿರುವ ಹಿನ್ನೆಲೆಯಲ್ಲಿ ಮರುತನಿಖೆ ಮಾಡಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ನೇತೃತ್ವದಲ್ಲಿ ಆ.26ರಿಂದ ಬೆಳ್ತಂಗಡಿಯಿಂದ ಆರಂಭಿಸಿ ಧರ್ಮಸ್ಥಳದ, ಕೊಟ್ಟಿಗೆಹಾರ, ಸಕಲೇಶಪುರ, ಹಾಸನ ಮಾರ್ಗವಾಗಿ ಬೆಂಗಳೂರಿಗೆ ನಡೆಯುವ ಪಾದಯಾತ್ರೆ ಸೆ.8ರಂದು ವಿಧಾನಸೌಧ ತಲುಪಲಿದೆ. ಸುಮಾರು 14 ದಿನ ನಡೆಯಲಿರುವ ಪಾದಯಾತ್ರೆ 330 ಕಿ.ಮೀ ಕ್ರಮಿಸಲಿದೆ. ಅಂತೆಯೇ ಮಕ್ಕಳ ಮತ್ತು ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಶೀಘ್ರ ವಿಲೇವಾರಿಗೆ ವಿಶೇಷ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ಧರ್ಮಸ್ಥಳದ ಸುತ್ತಮುತ್ತ ಹಲವಾರು ದಶಕಗಳಿಂದ ಆತ್ಮಹತ್ಯೆಗಳೂ ಸೇರಿದಂತೆ ನೂರಾರು ಅಸಹಜ ಸಾವಿನ ಪ್ರಕರಣಗಳು ನಡೆದಿವೆ ಎಂಬ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ನಿವೃತ್ತ ನಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಲಾಗುವುದು ಎಂದರು.

ಜಿಲ್ಲಾಧ್ಯಕ್ಷ ಜಿ.ಎನ್.ರಮೇಶಗೌಡ, ಪ್ರಧಾನ ಕಾರ್ಯದರ್ಶಿ ಚಂದ್ರು ಕೀಲಾರ, ಮಲ್ಲೇಶ್, ಜಗದೀಶ್, ಪುಟ್ಟರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net