

ಲಿಂಗಸುಗೂರು: ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಹೃದಯ ರೋಗ ತಜ್ಞರನ್ನು ನೇಮಕ ಮಾಡಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಟಿಎಚ್‌ಒ ಡಾ.ಅಮರೇಶ ಪಾಟೀಲಗೆ ಗುರುವಾರ ಮನವಿ ಸಲ್ಲಿಸಿದರು.
ಸರ್ಕಾರಿ ಆಸ್ಪತ್ರೆಯನ್ನು 100 ಹಾಸಿಗೆಗೆ ಮೇಲ್ದರ್ಜೆಗೇರಿಸಲಾಗಿದೆ. ಪ್ರತಿನಿತ್ಯ ತಾಲೂಕು ಹಾಗೂ ಬೇರೆ ತಾಲೂಕಿನ ನೂರಾರು ರೋಗಿಗಳು ಚಿಕಿತ್ಸೆಗಾಗಿ ಆಸ್ಪತ್ರೆ ಬರುತ್ತಿದ್ದಾರೆ. ಆದರೆ ಬಹುದಿನಗಳಿಂದ ಹೃದಯ ರೋಗ ತಜ್ಞರಿಲ್ಲದೆ ರೋಗಿಗಳು ಖಾಸಗಿ ಆಸ್ಪತ್ರೆ ಮತ್ತು ದೂರದ ನಗರ ಪ್ರದೇಶಗಳಿಗೆ ಅಲೆದಾಡುವಂತಾಗಿದೆ. ಕೆಲವು ಬಾರಿ ಬಡ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದ ಘಟನೆಗಳು ನಡೆದಿವೆ. ಸಮಸ್ಯೆ ಕುರಿತು ಹಾಲಿ ಶಾಸಕರು ಗಮನ ಹರಿಸದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಸರ್ಕಾರ ಕೂಡಲೇ ಹೃದಯ ರೋಗ ತಜ್ಞರನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿದರು.