ಮಿಮ್ಸ್ ಜಾಗ ವಿವಾದ ಮತ್ತೆ ಜಾಗೃತಿ: ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ ಹೇಳಿಕೆ

Karnataka Rakshana Vedike District President Press Conference Mandya
Published on

ಮಂಡ್ಯ: ಒತ್ತುವರಿಯಾಗಿರುವ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಗೆ ಸೇರಿದ 24 ಎಕರೆಗೂ ಹೆಚ್ಚಿನ ಭೂಮಿಯನ್ನು ತೆರವುಗೊಳಿಸುವಲ್ಲಿ ಜಿಲ್ಲಾಡಳಿತ ನಿರಾಸಕ್ತಿ ತೋರಿದೆ. ಮಾತ್ರವಲ್ಲದೆ ಜನಪ್ರತಿನಿಧಿಗಳ ಇಚ್ಛಾಸಕ್ತಿಯ ಕೊರತೆಯಿಂದ ಜಿಲ್ಲೆಗೆ ಆಗುತ್ತಿರುವ ಅನ್ಯಾಯದ ಕುರಿತು ಆ.15ರಿಂದ ಎರಡನೇ ಹಂತದ ಜಾಗೃತಿ ಜಾಥಾ ಆರಂಭಿಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ ತಿಳಿಸಿದರು.

ಮಿಮ್ಸ್‌ಗೆ ಸೇರಿದ ಜಾಗವನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಭೂಮಿಯಲ್ಲಿ ಮಿಮ್ಸ್ ವಶಕ್ಕೆ ನೀಡುವಂತೆ ಆಗ್ರಹಿಸಿ ಜು.1ರಿಂದ ಕನ್ನಡ ಪರ, ರೈತ ಪರ ಸಂಘಟನೆಗಳು ಬೈಕ್ ರ‌್ಯಾಲಿ ಮೂಲಕ ಜಾಗೃತಿ ಮೂಡಿಸಲಾಗಿತ್ತು. ಇದೀಗ ಎರಡನೇ ಹಂತದ ಹೋರಾಟ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅಂದು ಬೈಕ್ ರ‌್ಯಾಲಿಗೆ ಮಣಿದಿದ್ದ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಉಪವಿಭಾಗಾಧಿಕಾರಿ, ತಹಸೀಲ್ದಾರ್, ನಗರಸಭೆ ಆಯುಕ್ತರು ಸೇರಿ ಹಲವು ಅಧಿಕಾರಿಗಳ ಸಮಿತಿ ರಚಿಸಿ ವಿವಾದಿತ ಭೂಮಿಯ ಸರ್ವೇ, ಒತ್ತುವರಿದಾರರಿಗೆ ನೋಟಿಸ್ ಜಾರಿ ಹಾಗೂ ಈ ಸಂಬಂಧ ಹೈಕೋರ್ಟ್ ಪ್ರಕ್ರಿಯೆ ಸಮರ್ಪಕ ನಿರ್ವಹಣೆಗೆ ಆದೇಶಿದ್ದರು. ಆದರೆ ಆ ಸಮಿತಿಯು ಯಾವುದೇ ಚಟುವಟಿಕೆ ನಡೆಸದೇ ನಿಷ್ಕಿಯವಾಗಿ ನಿರಾಸಕ್ತಿ ತೋರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಿಮ್ಸ್ ಆಡಳಿತವೂ ನ್ಯಾಯಾಲಯದಲ್ಲಿ ವಕೀಲರ ಮೂಲಕ ಪ್ರಕ್ರಿಯೆ ನಡೆಸಿ ಭೂಮಿ ವಶಕ್ಕೆ ಪಡೆಯಲು ವಿಫಲವಾಗಿದೆ. ಪರಿಣಾಮ ಕಳೆದೆರಡು ವರ್ಷದ ಹಿಂದೆ ತಡೆಯಾಜ್ಞೆ ತೆರವುಗೊಳಿಸಲು ಸಾಧ್ಯವಾಗಿಲ್ಲ. ಇದು ಜನಪ್ರತಿನಿಧಿಗಳ ತಮ್ಮ ಮತ ಬ್ಯಾಂಕ್ ಆಸಕ್ತಿಗೆ ಸಾಕ್ಷಿಯಾಗಿದೆ. ಒತ್ತುವರಿ ತೆರವಿಗೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಇಚ್ಛಾಸಕ್ತಿಯ ಕೊರತೆಯಿಂದಾಗಿ ಜಿಲ್ಲೆಗೆ ಆಗಬೇಕಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾಕೇರ್‌ನ ಕನಸು ನನಸಾಗಿಯೇ ಉಳಿಯಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕರುನಾಡ ಸೇವಕರು ಸಂಘಟನೆಯ ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಮಾತನಾಡಿ, ಸರ್ವೇ ವಿಚಾರವಾಗಿ ಜಿಲ್ಲಾಡಳಿತ ನೀಡಿದ ಆದೇಶ ಪಾಲನೆಗೆ ಕರ್ನಾಟಕದಲ್ಲಿ ಕೈಲಾಗದಂತೆ ಸಮಿತಿ ಕುಳಿತಿದೆ. ಒಂದು ಕಾಲನಿಗೆ ಹೋಗಲು ಎದರುತ್ತಿದ್ದಾರೆ. ಕೂಡಲೇ ಸರ್ವೇ ಮಾಡಿ ಒತ್ತುವರಿ ತೆರವುಗೊಳಿಸದಿದ್ದರೆ, ಅದು ಜಿಲ್ಲೆಗೆ ಮಾಡುವ ದ್ರೋಹವಾಗುತ್ತದೆ ಎಂದು ಕಿಡಿಕಾರಿದರು.

2022ರಲ್ಲಿ ಆಗಿ ಅಪರ ಜಿಲ್ಲಾಧಿಕಾರಿಯಾಗಿದ್ದ ಎಚ್.ಎಲ್.ನಾಗರಾಜು ಅವರು ಸರ್ವೇ ಮಾಡಲು ಮುಂದಾದಾಗ ಕರ್ತವ್ಯಕ್ಕೆ ಅಡ್ಡಿ ಪರಿಸಲಾಗಿತ್ತು. 2023ರಲ್ಲಿ ತಮಿಳು ಕಾಲನಿಯವರು ಹೈಕೋರ್ಟ್‌ನಲ್ಲಿ ಸರ್ವೇಗೆ ತಡೆ ತಂದಿದ್ದು, ಅದನ್ನು ತೆರವುಗೊಳಿಸಲು ಮಿಮ್ಸ್ ಮತ್ತು ನಗರಸಭೆ, ಜಿಲ್ಲಾಡಳಿತ ಆಸಕ್ತಿ ತೋರುತ್ತಿಲ್ಲ. ಇನ್ನು ಈ ಸಂಬಂಧ ರಚನೆಯಾದ ಸಮಿತಿಯು ಪ್ರಾಥಮಿಕ ಸಭೆ ನಡೆಸಿರುವುದಾಗಿ ಉಪವಿಭಾಗಾಧಿಕಾರಿ ಸುಳ್ಳು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಿಮ್ಸ್‌ಗೆ ಸೇರಿದ ಭೂಮಿಯನ್ನು ಹಿಂಪಡೆಯಲು ಕನ್ನಡ ಪರ, ಪ್ರಗತಿಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಜಾಗೃತಿ ಜಾಥದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಕೆಆರ್‌ಎಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಕೀಲಾರ, ಜಿಲ್ಲಾ ಉಪಾಧ್ಯಕ್ಷ ಮಲ್ಲೇಶ್, ರೈತ ಸಂಘದ ಚಂದ್ರಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net