ಸಮಾಜಕ್ಕೆ ಉತ್ತಮ ಕೊಡುಗೆ ನೀಡಿ

ranga
ತಿಂಗಳ ಕರ್ನಾಟಕ ರಾಜ್ಯೋತ್ಸವ
Published on

ವಿಜಯವಾಣಿ ಸುದ್ದಿಜಾಲ ತ್ಯಾಮಗೊಂಡ್ಲು
ಭಗವಂತ ಈ ಭೂಮಿ ಮೇಲೆ ನಮಗೊಂದು ಉತ್ತಮ ಅವಕಾಶ ನೀಡಿದ್ದಾನೆ. ಅದನ್ನು ಸದುಪಯೋಗ ಮಾಡಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಸಾಹಿತಿ ಹಾಗೂ ಚಿಂತಕ ಡಾ.ವೆಂಕಟೇಶ ಚೌಥಾಯಿ ಕಿವಿಮಾತು ಹೇಳಿದರು.
ಪಟ್ಟಣದ ಟಿಕೆಕೆಎಂಎಚ್‌ಎಸ್ ಟ್ರಸ್ಟ್‌ನ ಶಾರದಾ ವಿದ್ಯಾಪೀಠ ಶಾಲೆಯಲ್ಲಿ ನೆಲಮಂಗಲದ ಕನ್ನಡ ಸಾಂಸ್ಕೃತಿಕ ರಂಗ ಇತ್ತೀಚೆಗೆ ಆಯೋಜಿಸಿದ್ದ ತಿಂಗಳ ಕರ್ನಾಟಕ ರಾಜ್ಯೋತ್ಸವ ಮತ್ತು ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿ ಚಂದ್ರಶೇಖರ ಕಂಬಾರರ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.
ಇಂದಿನ ಶಿಕ್ಷಣ ಉದ್ಯೋಗಕ್ಕಾಗಿ ಮಾತ್ರ ಎನ್ನುವಂತಾಗಿದೆ. ಈ ಹಿಂದೆ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ, ಸಾಂಸ್ಕೃತಿಕ ಶಿಕ್ಷಣ ದೊರಕುತ್ತಿತ್ತು. ಆದರೆ, ಈಗ ಶಿಕ್ಷಕರು ಕಲಿಸಲು ತಯಾರಿದ್ದರೂ ವಿದ್ಯಾರ್ಥಿಗಳಿಗೆ ಅದೆಲ್ಲ ಬೇಡವಾಗಿದೆ ಎಂದರು.
ಯಾರಿಗೆ ಜೀವನದ ಬೆಲೆ, ಮಹತ್ವ ತಿಳಿಸಿರುವುದೋ ಅವರು ಎಂದೂ ಸಮಯ ಮತ್ತು ಅವಕಾಶವನ್ನು ವ್ಯರ್ಥ ಮಾಡಿಕೊಳ್ಳುವುದಿಲ್ಲ. ಅದನ್ನು ಉಪಯೋಗಿಸಿಕೊಂಡು ಸಾಧಿಸುತ್ತಾರೆ. ಆದ್ದರಿಂದ ವಿದ್ಯಾರ್ಥಿ ಜೀವನವನ್ನು ವ್ಯರ್ಥ ಮಾಡದೆ, ಸುಪ್ತ ಪ್ರತಿಭೆಯನ್ನು ಪ್ರದರ್ಶಿಸಲು ಗುರುಗಳ ನೇತೃತ್ವದಲ್ಲಿ ಸಿಗುವ ಅವಕಾಶ ಬಳಸಿ, ಬೆಳೆದುಕೊಳ್ಳಬೇಕು ಎಂದರು.
ಕನ್ನಡ ಸಾಂಸ್ಕೃತಿಕ ರಂಗದ ಅಧ್ಯಕ್ಷ ಸಿದ್ದರಾಜು ಮಾತನಾಡಿ, ಒಂದು ದಶಕದಿಂದ ಕನ್ನಡಪರ ಕಾರ್ಯಕ್ರಮ ಸಂಘಟಿಸಿ, ಯುವ ಜನತೆಯಲ್ಲಿ ಕನ್ನಡದ ಬಗ್ಗೆ ಒಲವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ವರ್ಷಕ್ಕೊಮ್ಮೆ ಮಾತ್ರ ರಾಜ್ಯೋತ್ಸವ ಮಾಡದೆ, ಪ್ರತಿ ತಿಂಗಳು ರಾಜ್ಯೋತ್ಸವ ಆಚರಿಸಿ, ಸ್ಥಳೀಯ ಲೇಖಕರ ಮತ್ತು ಪ್ರಸಿದ್ಧ ಕವಿಗಳ ಜನ್ಮ ದಿನ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಶಾಲೆಯ ಮುಖ್ಯಶಿಕ್ಷಕ ರೇಣುಕಯ್ಯ ಮಾತನಾಡಿ, ಪಿತೃ, ಮಾತೃ ಮತ್ತು ಗುರುಗಳ ಋಣವನ್ನು ತೀರಿಸಲು ಶ್ರಮಿಸಬೇಕು. ಅದೇ ರೀತಿ ನಮ್ಮ ಅಭ್ಯುದಯಕ್ಕಾಗಿ ಜೀವನದಲ್ಲಿ ಸೋತ ತಂದೆ, ಶ್ರೇಯಸ್ಸಿಗಾಗಿ ದೇವರಲ್ಲಿ ಸೆರಗೊಡ್ಡಿ ಬೇಡಿಕೊಂಡ ತಾಯಿ ಮತ್ತು ಕಲ್ಲನ್ನು ಸುಂದರ ಮೂರ್ತಿಯಾಗಿ ಕಡೆದ ಗುರುಗಳನ್ನು ಮರೆಯಬಾರದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net