

ಹುಬ್ಬಳ್ಳಿ : ಹೊಸ ಶಿಕ್ಷಣ ನೀತಿಯಲ್ಲಿ ಕೇಂದ್ರ ಸರ್ಕಾರ ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ನೀಡಿದೆ. ತಾಂತ್ರಿಕ ಶಿಕ್ಷಣ, ವೈದ್ಯಕೀಯ ಶಿಕ್ಷಣವನ್ನು ಆಯಾ ಪ್ರಾದೇಶಿಕ ಭಾಷೆಯಲ್ಲಿಯೇ ಅಧ್ಯಯನ ಮಾಡಲು ಅವಕಾಶ ಕಲ್ಪಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಇಲ್ಲಿನ ಶ್ರೀ ಸಿದ್ಧಾರೂಢ ಮಠದ ಆವರಣದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಶುಕ್ರವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳು ಹೆಚ್ಚಿನ ಭಾಷೆಗಳನ್ನು ಕಲಿಯಬೇಕು. ಆದರೆ, ಮಾತೃ ಭಾಷೆಗೆ ಆದ್ಯತೆ ನೀಡಬೇಕು. ಮನೆಯಲ್ಲಿ ಕನ್ನಡ ಮಾತನಾಡಲು ಪಾಲಕರು ತಮ್ಮ ಮಕ್ಕಳಿಗೆ ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಏಕೀಕರಣ ಹೋರಾಟದಲ್ಲಿ ಈ ಭಾಗದ ಪಾತ್ರ ಮಹತ್ವದ್ದು. ಏಕೀಕರಣ ಹೋರಾಟ ಧಾರವಾಡ ಕೇಂದ್ರೀಕೃತವಾಗಿ ನಡೆಯಿತು. ಕನ್ನಡ ಸೇರಿದಂತೆ ದೇಶದ ಹಲವು ಭಾಷೆಗಳಿಗೆ 5 ಸಾವಿರ ವರ್ಷಗಳ ಇತಿಹಾಸ ಇದೆ. ಆದರೆ, ಇಂಗ್ಲಿಷ್ ಸೇರಿದಂತೆ ವಿದೇಶಿ ಭಾಷೆಗಳಿಗೆ 500 ವರ್ಷಗಳ ಇತಿಹಾಸ ಇದೆ ಎಂದರು.
ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಮಾತನಾಡಿ, ಸಂಪೂರ್ಣ ಅಖಂಡ ಕರ್ನಾಟಕ ಅಭಿವೃದ್ಧಿಗೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರಾದೇಶಿಕ ತಾರತಮ್ಯತೆ ಇರಬಾರದು ಎಂದರು.
ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಪ್ರದೇಶಗಳು ರಾಜ್ಯದ ಮೈಸೂರು ಭಾಗಕ್ಕಿಂತ ಹಿಂದುಳಿದಿವೆ. ಹೀಗಾಗಿ, ಸರ್ಕಾರ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರ ರಚಿಸಿ, ಕೋಟ್ಯಾಂತರ ರೂಪಾಯಿ ಅನುದಾನ ನೀಡುತ್ತಿದೆ. ಅದೇ ರೀತಿ, ಕಿತ್ತೂರು ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರವನ್ನೂ ರಚಿಸಬೇಕು ಎಂದು ಆಗ್ರಹಿಸಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಕರ್ನಾಟಕ ಎಂದರೆ ಬೆಂಗಳೂರು ಅಷ್ಟೇ ಅಲ್ಲ. ರಾಜ್ಯದ ಇತರ ಪ್ರದೇಶಗಳ ಅಭಿವೃದ್ಧಿಗೂ ಸರ್ಕಾರ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಗಮನ ಹರಿಸಬೇಕು. ಈ ಭಾಗಕ್ಕೆ ಪ್ರಾಮುಖ್ಯತೆ ಕೊಡಬೇಕು. ಇಡೀ ರಾಜ್ಯದ ಬೆಳವಣಿಗೆ ಬಗ್ಗೆ ಸರ್ಕಾರ ಸಮಾನ ದೃಷ್ಟಿಕೋನ ಹೊಂದಿರಬೇಕು ಎಂದು ತಿಳಿಸದಿರು.
ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಪೌರ ರಾಮಪ್ಪ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಉಪ ಮಹಾಪೌರರಾದ ದುರ್ಗಮ್ಮ ಬಿಜವಾಡ, ಪ್ರತಿಪಕ್ಷ ನಾಯಕ ರಾಜಶೇಖರ ಕಮತಗಿ, ಸಭಾ ನಾಯಕ ವೀರಣ್ಣ ಸವಡಿ, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ, ಬೀರಪ್ಪ ಖಂಡೇಕಾರ, ರಾಜಣ್ಣ ಕೊರವಿ, ರೂಪಾ ಜೋಶಿ, ಶ್ರೀ ಸಿದ್ಧಾರೂಢ ಮಠ ಟ್ರಸ್ಟ್ ಕಮೀಟಿ ಪದಾಧಿಕಾರಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಇತರರು ಹಾಜರಿದ್ದರು.
ಅದ್ದೂರಿ ಮೆರವಣಿಗೆ : ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಶುಕ್ರವಾರ ಅದ್ದೂರಿ ಮೆರವಣಿಗೆ ಆಯೋಜಿಸಲಾಗಿತ್ತು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, ಶಾಸಕ ಮಹೇಶ ಟೆಂಗಿನಕಾಯಿ, ಮಹಾಪೌರ ರಾಮಪ್ಪ ಬಡಿಗೇರ ಅವರು ರಾಜ್ಯೋತ್ಸವದ ಮೆರವಣಿಗೆಗೆ ಚಾಲನೆ ನೀಡಿದರು.
ನಗರದ ಪ್ರಮುಖ ವೃತ್ತಗಳಲ್ಲಿ ಸಂಚರಿಸಿ, ನೆಹರು ಮೈದಾನದಲ್ಲಿ ಕೊನೆಗೊಂಡಿತು. ಮೆರವಣಿಗೆ ಉದ್ದಕ್ಕೂ ಕನ್ನಡಾಂಬೆಯ ಭಾವಚಿತ್ರ ಗಮನ ಸೆಳೆಯಿತು. ಇದರೊಂದಿಗೆ ಜಗಜ್ಯೋತಿ ಶ್ರೀ ಬಸವೇಶ್ವರ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ, ಚಿತ್ರನಟ ಪುನಿತ್ ರಾಜಕುಮಾರ ವೇಷಧಾರಿಗಳು ಮೆರವಣಿಗೆ ಉದ್ದಕ್ಕೂ ಗಮನ ಸೆಳೆದರು. ಸಿರಿಧಾನ್ಯದಲ್ಲ ರಚಿಸಿದ ಗರಗದ ಶ್ರೀ ಮಡಿವಾಳೇಶ್ವರ ಸ್ವಾಮೀಜಿ, ನೇಗಿಲು ಹೊತ್ತ ರೈತನ ಭಾವಚಿತ್ರಗಳು ಮೆರವಣಿಗೆ ಉದ್ದಕ್ಕೂ ಆಕರ್ಷಣೆಗೆ ಕಾರಣವಾಗಿದ್ದವು. ಹನುಮಂತ, ಜಾಂಬವ ಸೇರಿದಂತೆ ರಾಮಾಯಣದ ಪಾತ್ರಧಾರಿಗಳು, ಯಕ್ಷಗಾನದ ವೇಷ ತೊಟ್ಟ ಚಿಣ್ಣರು, ವಿವಿಧ ರೀತಿಯ ಗೊಂಬೆಗಳು ರಾಜ್ಯೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಕನ್ನಡಪರ ಘೋಷಣೆಗಳು ಕೇಳಿಬಂದವು. ಇದಕ್ಕೂ ಮೊದಲು ಶ್ರೀ ಸಿದ್ಧಾರೂಢ ಮಠದ ಆವರಣದಲ್ಲಿನ ವೇದಿಕೆಯಲ್ಲಿ ಕನ್ನಡಪರ ಚಿತ್ರಗೀತೆಗಳು ಮೊಳಗಿದವು.