ಶಿಕ್ಷಕರು ಮೌಲ್ಯಾಂಕನ ಪರೀಕ್ಷೆ ಯಶಸ್ವಿಗೆ ಶ್ರಮಿಸಿ: ಕ್ಷೇತ್ರ ಸಮನ್ವಯಾಧಿಕಾರಿ ಜಗದೀಶಪ್ಪ ಎಂ.

22 Hanumasagara 1
Published on

ಹನುಮಸಾಗರ: ಶಿಕ್ಷಕರು ಮೌಲ್ಯಾಂಕನ ಪರೀಕ್ಷೆಗಳನ್ನು ಅಚ್ಚುಕಟ್ಟಾಗಿ ನಡೆಸಬೇಕೆಂದು ಕ್ಷೇತ್ರ ಸಮನ್ವಯಾಧಿಕಾರಿ ಜಗದೀಶಪ್ಪ ಎಂ. ಹೇಳಿದರು.


ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಬಾಲಕರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಸಮನ್ವಯಾಧಿಕಾರಿಗಳ ಕಾರ್ಯಾಲಯದಿಂದ ಬುಧವಾರ ಹಮ್ಮಿಕೊಂಡ ಹನುಮಸಾಗರ ಮತ್ತು ಹನುಮನಾಳ ವಲಯದ ಶಾಲೆಗಳ ಮುಖ್ಯ ಶಿಕ್ಷಕರ ಸಭೆಯಲ್ಲಿ ಮಾತನಾಡಿದರು.

ಶಿಕ್ಷಕರು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದಕ್ಕಿಂತ ಹೆಚ್ಚಿನ ಜವಾಬ್ದಾರಿ ಈ ಮೌಲ್ಯಾಂಕನ ಪರೀಕ್ಷೆ ನಡೆಸಲು ತೋರಬೇಕು. ಪರೀಕ್ಷೆ ಕುರಿತು ಏನಾದರೂ ಗೊಂದಲಗಳಿದ್ದರೆ ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಿಕೊಳ್ಳಬೇಕು ಎಂದರು.


ಶಿಕ್ಷಣ ಸಂಯೋಜಕ ಜೀವನಸಾಬ್ ವಾಲೀಕಾರ ಮಾತನಾಡಿ, ಮಾ.9 ರಿಂದ 18ರವರೆಗೆ 5ಮತ್ತು 8ನೇ ತರಗತಿ ಮೌಲ್ಯಾಂಕನ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳ ಎಸ್‌ಎಟಿಎಸ್ ಮೂಲಕ ಆನ್‌ಲೈನ್ ಮಾಹಿತಿ ಪಡೆದು ಪರಿಶೀಲಿಸಿ ಪ್ರವೇಶ ಪತ್ರ ಮುದ್ರಿಸಿ ಕೊಡಲಾಗುವುದು. ಈ ಪರೀಕ್ಷೆಗೆ ಯಾವುದೇ ವಿದ್ಯಾರ್ಥಿಗಳಿಂದ ಪ್ರವೇಶ ಶುಲ್ಕ ಪಡೆದುಕೊಳ್ಳಬಾರದು. ತಾಲೂಕಿನಲ್ಲಿ 5ನೇ ತರಗತಿಗೆ 131, 8ನೇ ತರಗತಿಗೆ 53 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ಒಂದು ಕೇಂದ್ರಕ್ಕೆ 5ನೇ ತರಗತಿ ವಿದ್ಯಾರ್ಥಿಗಳು, 8 ನೇ ತರಗತಿ 50 ವಿದ್ಯಾರ್ಥಿಗಳು ಇರಲಿದ್ದಾರೆ. ನಿಗದಿಗಿಂತ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಯ ಮಕ್ಕಳನ್ನು ಪಕ್ಕದ ಶಾಲೆಗಳ ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕು. ಏ.8ಕ್ಕೆ 5ನೇ ತರಗತಿ ಮತ್ತು ಏ.10ಕ್ಕೆ 8ನೇ ತರಗತಿ ಫಲಿತಾಂಶ ಪ್ರಕಟವಾಗಲಿದೆ ಎಂದರು.


ಶಿಕ್ಷಣ ಸಂಯೋಜಕರಾದ ಜೀವನಸಾಬ್ ವಾಲಿಕಾರ, ಶರಣಪ್ಪ ತೆಮ್ಮಿನಾಳ, ಇಂದಿರಾ ಗಾಂಧಿ ವಸತಿ ಶಾಲೆ ಪ್ರಾಚಾರ್ಯ ಅನಿಲ ಸಂಗಮ, ಮುಖ್ಯ ಶಿಕ್ಷಕರಾದ ರಾಯಮ್ಮ ಉಕ್ಕಲಿ, ಹುಸೇನ್‌ಸಾಬ್ ಇಳಕಲ್, ರಾಜಕುಮಾರ ನಾಯಕ ಓಂಕಾರಗೌಡ ಗೌಡರ, ರಾಮಚಂದ್ರ ಬಡಿಗೇರ ನಿರ್ವಹಿಸಿದರು. ವಿವಿಧ ಕ್ಲಸ್ಟರ್‌ಗಳ ಸಿಆರ್‌ಪಿಗಳು, ಮುಖ್ಯ ಶಿಕ್ಷಕರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net