

ಮೈಸೂರು: ಸರ್ಕಾರಿ ಜಮೀನನ್ನು ಖಾಸಗಿಯವರಿಗೆ ನೀಡುವ ತೀರ್ಮಾನ ವಿರೋಧಿಸಿ, ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಪತ್ರ ನೀಡುವಂತೆ ಹಾಗೂ ಹಾಲಿಗೆ ಪ್ರೋತ್ಸಾಹಧನ ಹೆಚ್ಚಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಯಿತು.
ನಗರದ ಹಳೇ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು, ನಾನಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ಸರ್ಕಾರ ಬಂದರೂ ಬಡ ಬಗರ್ ಹುಕುಂ ಸಾಗುವಳಿದಾರರನ್ನು ಮರೆಯುತ್ತವೆ. ಸಾಗುವಳಿ ಪತ್ರ ಇಲ್ಲದೆ ರೈತರು ಸರ್ಕಾರಿ ಸವಲತ್ತು ಪಡೆಯಲು, ಬರ ಪರಿಹಾರ ಪಡೆಯಲು ಸಾಧ್ಯವಾಗಿಲ್ಲ. ರಾಜ್ಯ ಸರ್ಕಾರ ಮುಂದಿನ 8 ತಿಂಗಳ ಒಳಗೆ ಅರ್ಜಿ ವಿಲೇವಾರಿ ಮಾಡುವುದಾಗಿ ಹೇಳಿರುವುದು ಸ್ವಾಗತಾರ್ಹ. ಜತೆಗೆ ಜಿಲ್ಲೆಯ ಎಲ್ಲ ತಾಲೂಕುಗಳ ಸಾವಿರಾರು ಎಕರೆ ಜಮೀನು ಪಕ್ಕ ಪೋಡಿಯಾಗದೆ ಹಾಗೆಯೇ ಉಳಿದಿದೆ. ಇದರಿಂದ ರೈತರಿಗೆ ತಮ್ಮ ಮಕ್ಕಳಿಗೆ ಜಮೀನು ವರ್ಗಾಯಿಸಲು, ಅಭಿವೃದ್ಧಿ ಮಾಡಲು ಕಷ್ಟಕರವಾಗಿದೆ. ಹೀಗಾಗಿ ಜಮೀನುಗಳ ಪೋಡು ಮಾಡಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.