ಮಂಡ್ಯ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿ: ರಾಜ್ಯ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ಪುಟ್ಟಮಾದು ಆಗ್ರಹ

1 (2)
Published on

ಮದ್ದೂರು: ಮಂಡ್ಯವನ್ನು ಬರಪಿಡಿತ ಜಿಲ್ಲೆ ಎಂದು ಘೋಷಣೆ ಮಾಡಲು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ಎಂ.ಪುಟ್ಟಮಾದು ಆಗ್ರಹಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಕೆಆರ್‌ಎಸ್‌ಗೆ ನೀರಿನ ಒಳಹರಿವು ಕಡಿಮೆಯಾಗಿದೆ. ರೈತರು ನಾಟಿ ಮಾಡಲು ವಿಳಂಬವಾಗುತ್ತಿದೆ. ನೀರಿಲ್ಲದೆ ಸಕಾಲಕ್ಕೆ ಬೆಳೆಯನ್ನು ಬೆಳೆಯಲು ಸಾಧ್ಯವಿಲ್ಲ. ನಿಗದಿತ ಪ್ರಮಾಣ ಮಳೆ ಬೀಳದಿರುವುದರಿಂದ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯನ್ನಾಗಿ ಸರ್ಕಾರ ಕೂಡಲೇ ಘೋಷಣೆ ಮಾಡಬೇಕು ಎಂದರು.

ನರೇಗಾ ಯೋಜನೆಯಲ್ಲಿ 100 ದಿನ ಕೆಲಸ ನೀಡುತ್ತಿದ್ದು, 150 ಮಾನವ ದಿನಗಳಿಗೆ ಕೆಲಸ ಹೆಚ್ಚಿಸಬೇಕು. ಮೂರು ತಿಂಗಳ ಅವಧಿಗೆ ಕೂಲಿ ಕಾರ್ಮಿಕರು ಮತ್ತು ರೈತರು ಆರ್ಥಿಕವಾಗಿ ಸಬಲರಾಗುವಂತೆ ಯೋಜನೆ ರೂಪಿಸಿ ಮಂಡ್ಯ ಜಿಲ್ಲೆಯಲ್ಲಿ ಅನುಷ್ಠಾನ ಮಡಬೇಕು. ಈಗಿರುವ ಬೆಳೆಗಳಿಗೆ ಕಟ್ಟು ಪದ್ಧತಿಯಲ್ಲಿ ನೀರು ನೀಡಬೇಕು ಎಂದು ಒತ್ತಾಯಿಸಿದರು.

ಬಡವರು ಬಳಸುವ ದಿನಬಳಕೆಯ ವಸ್ತುಗಳ ಬೆಲೆಗಳನ್ನು ವಿಪರೀತವಾಗಿ ಏರಿಸಲಾಗಿದೆ. ಇದರಿಂದ ಜನ ಸಾಮಾನ್ಯರು ಜೀವನ ಮಾಡಲು ಕಷ್ಟ ಪಡುವಂತಾಗಿದೆ. ಪ್ರಧಾನಿ ಮೋದಿಯವರು ವಿದೇಶ ಸುತ್ತುವುದನ್ನು ಬಿಟ್ಟು ಭಾರತದ ಬಡ ಜನರ ಜೀವನದ ಪರಿಸ್ಥಿತಿ ಬಗ್ಗೆ ಅವಲೋಕಿಸಿ ಬೆಲೆಗಳನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.

ಸಿಡಬ್ಲುೃಸಿ ಸಭೆ: ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಸಭೆ ತೆಲಂಗಾಣದ ನಲಗೊಂಡ ಜಿಲ್ಲೆಯ ನಾಗರ್ಜುನ ಸಾಗರದಲ್ಲಿ ಜು. 18, 19 ಮತ್ತು 20, ರಂದು ನಡೆಯಲಿದೆ. ವಿವಿಧ ರಾಜ್ಯಗಳ 67 ಸದಸ್ಯರು ಸಭೆಯಲ್ಲಿ ಭಾಗವಹಿಸಿ, ಬೆಲೆ ಏರಿಕೆ ನರೇಗಾ ಸಶಕ್ತೀಕರಣ ಸೇರಿದಂತೆ ಇನ್ನಿತರ ವಿಷಯಗಳನ್ನು ಗಂಭೀರವಾಗಿ ಚರ್ಚಿಸಲಿದ್ದಾರೆ ಎಂದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ, ಜಿಲ್ಲಾ ಉಪಾಧ್ಯಕ್ಷರಾದ ಬಿ.ಎಂ. ಶಿವಮಲ್ಲಯ್ಯ, ಕಪನಿಗೌಡ, ರಾಜ್ಯ ಸಮಿತಿ ಸದಸ್ಯ ಬಿ.ಎಂ.ಮಧುಕುಮಾರ, ಮದ್ದೂರು ತಾಲೂಕು ಕಾರ್ಯದರ್ಶಿ ತೈಲೂರು ಟಿ.ಪಿ. ಅರುಣ ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net