ದಕ್ಷತೆಗೆ ಮತ್ತೊಂದು ಹೆಸರು ಕರ್ನಾಟಕ ಪೊಲೀಸ್

h2-Flag Day
Published on

ಹುಬ್ಬಳ್ಳಿ: ದಕ್ಷತೆ, ಅತ್ಯುತ್ತಮ ಕಾರ್ಯನಿರ್ವಹಣೆಯಿಂದ ರಾಷ್ಟ್ರ ಮಟ್ಟದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ದೊಡ್ಡ ಮನ್ನಣೆ ಗಳಿಸಿದೆ ಎಂದು ನಿವೃತ್ತ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಎಸ್.ಎಸ್. ಜಕ್ಕನಗೌಡ್ರ ಅಭಿಪ್ರಾಯಪಟ್ಟರು.

ಹುಬ್ಬಳ್ಳಿ -ಧಾರವಾಡ ಪೊಲೀಸ್ ಆಯುಕ್ತಾಲಯದಿಂದ ಇಲ್ಲಿಯ ಕಾರವಾರ ರಸ್ತೆಯ ಹಳೇ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿರಿಯ ಅಧಿಕಾರಿಗಳಿಂದ ಕಿರಿಯ ಅಧಿಕಾರಿಗಳು ಸಾಕಷ್ಟು ಕಲಿಯಬಹುದು. ಯುವ ಶಕ್ತಿಯನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು. ಯುವ ಅಧಿಕಾರಿಗಳು ಉತ್ಸಾಹದಿಂದ ಕಾರ್ಯ ನಿರ್ವಹಿಸಬೇಕು. ಪೊಲೀಸ್ ಇಲಾಖೆಯನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿವಳಿಕೆ ನೀಡಿದರು.

ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎಸ್.ವಿ. ಪ್ರಸಾದ ಮಾತನಾಡಿ, ಇಂಥ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ನನಗೆ ನಿಜಕ್ಕೂ ಸಂತಸ ತಂದಿದೆ. ಸಾರ್ವಜನಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಪೊಲೀಸ್ ಇಲಾಖೆ ಎಂದರೆ ಮೊದಲು ಭಯವಿತ್ತು. ಇದೀಗ ಮುಕ್ತವಾಗಿದೆ. ಪೊಲೀಸರು ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದರು.

ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಸಾಲಿನಲ್ಲಿ ಪೊಲೀಸ್ ಪ್ರಧಾನ ಕಚೇರಿಯಿಂದ 33.50 ಲಕ್ಷ ರೂ. ಮೌಲ್ಯದ ಧ್ವಜಗಳಿಂದ 33.80 ಲಕ್ಷ ರೂ. ಮೊತ್ತ ಸಂಗ್ರಹಿಸಲಾಗಿತ್ತು. ಅದರಲ್ಲಿ ಶೇ. 50ರಷ್ಟು ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿ ಹಾಗೂ ಉಳಿದ ಶೇ. 50ರಷ್ಟು ಮೊತ್ತವನ್ನು ಕೇಂದ್ರ ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಗೆ ಜಮೆ ಮಾಡಲಾಗಿದೆ. ಈ ಸಾಲಿನಲ್ಲಿ 37.55 ಲಕ್ಷ ರೂ. ಮೌಲ್ಯದ ಪೊಲೀಸ್ ಧ್ವಜಗಳನ್ನು ಹಂಚಿಕೆ ಮಾಡಲಾಗಿದೆ. ಕಳೆದ ಸಾಲಿನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಯಿಂದ ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವೈದ್ಯಕೀಯ ವೆಚ್ಚಕ್ಕೆ 5.38 ಲಕ್ಷ ರೂ. ಹಾಗೂ 80 ಸಾವಿರ ರೂ. ನಿಧನ ಹೊಂದಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಅಂತ್ಯ ಸಂಸ್ಕಾರಕ್ಕೆ ಬಳಸಲಾಗಿದೆ. 837 ಜನರು ವೈದ್ಯಕೀಯ ಸೌಲಭ್ಯ ಪಡೆದುಕೊಂಡಿದ್ದಾರೆ. ಅಲ್ಲದೇ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮಕ್ಕಳ ಎಸ್‌ಎಸ್‌ಎಲ್ಸಿ ಹಾಗೂ ನಂತರದ ವಿದ್ಯಾಭ್ಯಾಸಕ್ಕಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 12,84,629 ರೂ. ಶೈಕ್ಷಣಿಕ ಪ್ರೋತ್ಸಾಹ ಧನ ನೀಡಲಾಗಿದೆ ಎಂದು ವಿವರಿಸಿದರು.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿಗಳಾದ ದೇವರಾಜ, ಮಾರುತಿ ಬ್ಯಾಕೋಡ ಮಾತನಾಡಿದರು.

ಸಾಂಕೇತಿಕವಾಗಿ ಪೊಲೀಸ್ ಧ್ವಜಗಳನ್ನು ಬಿಡುಗಡೆಗೊಳಿಸಲಾಯಿತು. ಡಾ.ವಿ.ಎಸ್.ವಿ. ಪ್ರಸಾದ ಅವರು ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಗೆ 1 ಲಕ್ಷ ರೂ. ಚೆಕ್ ವಿತರಿಸಿದರು. ನಿವೃತ್ತ ಎಎಸ್‌ಐ ಡಿ.ಎಸ್. ಕುರಿ ಅವರನ್ನು ಗೌರವಿಸಲಾಯಿತು.

ನಾಗರಾಜ ಪಾಟೀಲ ನೇತೃತ್ವದಲ್ಲಿ ವಿವಿಧ ವಿಭಾಗ ತಂಡಗಳು ಆಕರ್ಷಕ ಪಥ ಸಂಚಲನ ನಡೆಸಿದವು.

ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಡಿಸಿಪಿಗಳಾದ ಮಹಾನಿಂಗ ನಂದಗಾಂವಿ, ರವೀಶ ಚಿಕ್ಕನಾಯಕನಹಳ್ಳಿ, ವೈ.ಕೆ. ಕಾಶಪ್ಪನವರ, ನಿವೃತ್ತ ಪೊಲೀಸ್ ಅಧಿಕಾರಿಗಳಾದ ರವಿ ನಾಯಕ, ಎ.ಎನ್. ಜೋಗಳೇಕರ, ಆರ್.ಜಿ. ಅಂಗಡಿ, ಶಿವಶಂಕರ ಗಡಾದ, ಪ್ರಭುದೇವ, ಎ.ಬಿ. ಬಸರಗಿ, ಎಸ್.ಸಿ. ಯಾದವ, ಡಿ.ಡಿ. ಮಾಳಗಿ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net