

ಬೆಂಗಳೂರು: ನೃತ್ಯ ಕಾಲಾವಿದರಿಗೆ ವೇದಿಕೆ ಸಿಗುವುದು ಅಷ್ಟು ಸುಲಭವಿಲ್ಲ. ಆದ್ದರಿಂದ ಕಲಾವಿದರು ನಿರಾಸೆಗೊಳ್ಳದೆ ಅವಕಾಶ ಸಿಗುವವರೆಗೆ ಕಾಯಬೇಕು ಎಂದು ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭ ಧನಂಜಯ ಹೇಳಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಕಲಾವಿದ ಡಾ.ಎ.ವಿ.ಸತ್ಯನಾರಾಯಣ 75ರ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಸತ್ಯಾ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೇರೆಲ್ಲಾ ಕಲಾವಿದರಿಗಿಂತ ನೃತ್ಯ ಕಲಾವಿದರಿಗೆ ಬೇಗ ವೇದಿಕೆ ಸಿಗುವುದಿಲ್ಲ. ಆದರೆ ಕಲಾವಿದರು ನಿರೀಕ್ಷೆ ಇಲ್ಲದೆ ತಾಳ್ಮೆಯಿಂದ ಕಲೆಗೆ ನ್ಯಾಯ ಒದಗಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿರಬೇಕು. ಅಂತಹವರಲ್ಲಿ ಡಾ.ಸತ್ಯನಾರಾಯಣ ಕರ್ನಾಟಕದ ನೃತ್ಯಕ್ಷೇತ್ರಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡ ಅಪರೂಪದ ಕಲಾವಿದ. ತಾವು ಬೆಳೆಯುವುದಷ್ಟೇ ಅಲ್ಲದೆ ನೃತ್ಯದ ಬಗ್ಗೆ ಆಸಕ್ತಿ ಇರುವ ಹಲವಾರು ಉದಯೋನ್ಮುಖ ಕಲಾವಿದರಿಗೆ ಪ್ರೋತ್ಸಾಹ ನೀಡಿ, ಅವರಿಗೆ ಬೃಹತ್ ವೇದಿಕೆಗಳಲ್ಲಿ ಅವಕಾಶವನ್ನು ಒದಗಿಸಿಕೊಡುತ್ತಿದ್ದಾರೆ. ಕೆನರಾ ಬ್ಯಾಂಕಿನ ಉದ್ಯೋಗಿಯಾಗಿದ್ದುಕೊಂಡು ನೃತ್ಯವನ್ನು ತಮ್ಮ ಉಸಿರಾಗಿಸಿಕೊಂಡು ಈ ಇಳಿ ವಯಸ್ಸಿನಲ್ಲೂ ಹುಮ್ಮಸ್ಸು ಕಳೆದುಕೊಳ್ಳದೆ ಒಂದಲ್ಲ ಒಂದು ರೀತಿಯಲ್ಲಿ ನಿರಂತರ ಚಟುವಟಿಕೆ ನಡೆಸುತ್ತಿರುವುದು ಯುವ ಕಲಾವಿದರಿಗೆ ಮಾದರಿ. ಹಾಡುತ್ತಾ ಹಾಡುತ್ತಾ ರಾಗ, ಹೆಜ್ಜೆ ಹಾಕುತ್ತಾ ಹಾಕುತ್ತಾ ನೃತ್ಯ ಎನ್ನುವಂತೆ ಬಹಳ ಪರಿಶ್ರಮದಿಂದ ನೃತ್ಯವನ್ನು ಕಲಿತು ಕಲೆಯನ್ನು ಬೆಳೆಸುತ್ತಿದ್ದಾರೆ ಎಂದು ಶುಭ ಪ್ರಶಂಸಿದರು.
ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಅತ್ಯಾಕರ್ಷಕ ನೃತ್ಯ ರೂಪಕಗಳ ಪ್ರದರ್ಶನ ನಡೆಯಲಿದ್ದು, ಮೊದಲನೇ ದಿನ ಪ್ರದರ್ಶನ ನೀಡಿದ ಸರ್ವಂ ಕೃಷ್ಣ ಮಯಂ ಸುದೀರ್ಘ ನೃತ್ಯ ರೂಪಕ ಪ್ರೇಕ್ಷಕರ ಗಮನ ಸೆಳೆಯಿತು. ನಂತರ ನಡೆದ ಸಾಮೂಹಿಕ ದಾಂಡಿಯಾ ನೃತ್ಯದಲ್ಲಿ ಕಲಾವಿದರು, ಪ್ರೇಕ್ಷಕರು ಪಾಲ್ಗೊಂಡು ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಡಿಸ್ಟ್ರಿಕ್ಟ್ ಗೌರ್ನರ್ ಸತೀಶ ಮಾಧವನ್, ಡಾ.ಎ.ವಿ.ಸತ್ಯನಾರಾಯಣ ಮತ್ತಿತರರು ಉಪಸ್ಥಿತರಿದ್ದರು.