ಪುನಃ ಅಧಿವೇಶನ ಕರೆಯಲು ರಾಜ್ಯಪಾಲರಿಗೆ ಮೊರೆ

Karnataka Leglislative council
Published on

ಬೆಂಗಳೂರು: ವಿಧಾನ ಪರಿಷತ್ ಅಧಿವೇಶನ ಮತ್ತೊಮ್ಮೆ ಕರೆದು, ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ಚರ್ಚೆಗೆ ಅವಕಾಶ ಕಲ್ಪಿಸುವಂತೆ ಸಭಾಪತಿಗೆ ನಿರ್ದೇಶನ ನೀಡಬೇಕು ಎಂದು ರಾಜ್ಯಪಾಲರಿಗೆ ಬಿಜೆಪಿ, ಜೆಡಿಎಸ್ ನಿಯೋಗ ಮೊರೆಯಿಟ್ಟಿವೆ. ಭೇಟಿ ವೇಳೆ ಕಲಾಪದಲ್ಲಿ ನಡೆಸ ವಿದ್ಯಮಾನ ಕುರಿತು ವಿವರಿಸಿ, ಸಭಾಪತಿ ನಡವಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ನಿಯೋಗದ ಮನವಿಯನ್ನು ರಾಜ್ಯಪಾಲ ವಜುಭಾಯಿ ವಾಲಾ ಆಲಿಸಿ, ಕಾನೂನು ತಜ್ಞರ ಜತೆಗೆ ಸಮಾಲೋಚಿಸಿ ಸೂಕ್ತ ತೀರ್ವನಕ್ಕೆ ಭರವಸೆ ನೀಡಿದ್ದಾರೆ.

ಸಂವಿಧಾನಬಾಹಿರ ವರ್ತನೆ

ನಿಯಮದ ಪ್ರಕಾರ ಸದನದ ಕಲಾಪ ನಡೆದಿಲ್ಲ. ಅಲ್ಲದೆ, ಸಭಾಪತಿ ದಿಢೀರ್​ನೆ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿ ಸಂವಿಧಾನಬಾಹಿರವಾಗಿ ವರ್ತಿಸಿದ್ದಾರೆ ಎಂದು ಈ ನಿಯೋಗ ಸಲ್ಲಿಸಿದ ದೂರಿನಲ್ಲಿ ತಿಳಿಸಿದೆ. ಪರಿಷತ್ ಅಧಿವೇಶನ ಪುನಃ ಕರೆದು, ಸಂವಿಧಾನದ ನಿಯಮಾವಳಿ ಪ್ರಕಾರ ಕಲಾಪ ನಿರ್ವಹಿಸಲು ಸಭಾಪತಿಗೆ ಸೂಚಿಸಬೇಕು ಎಂದು ರಾಜ್ಯಪಾಲರಿಗೆ ಜಂಟಿಯಾಗಿ ಮನವಿ ಮಾಡಿಕೊಂಡಿದೆ.

ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಗೆ ಅವಕಾಶ ಕಲ್ಪಿಸಿದರೆ ಸಭಾಪತಿ ಸ್ಥಾನ ಹೋಗುತ್ತದೆ ಎಂದು ಕಾಂಗ್ರೆಸ್​ನವರು ಕೆಟ್ಟ ದೃಶ್ಯ ಸೃಷ್ಟಿಸಿ, ಅನಿರ್ದಿಷ್ಟಾವಧಿಗೆ ಮುಂದೂಡುವಂತೆ ಮಾಡಿದ್ದಾರೆ. ಮನವಿ ಆಲಿಸಿರುವ ರಾಜ್ಯಪಾಲರು ಕಾನೂನಾತ್ಮಕವಾಗಿ ರ್ಚಚಿಸಿ ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ. -ಜೆ.ಸಿ.ಮಾಧುಸ್ವಾಮಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ.

ಘಟನೆಯ ಮಾಹಿತಿ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ. ಈ ಹಿನ್ನೆಲೆಯಲ್ಲಿ ನಿಯಮದಂತೆ ಉಪ ಸಭಾಪತಿ ಅವರನ್ನು ಪೀಠಾಧ್ಯಕ್ಷರ ಸ್ಥಾನದಲ್ಲಿ ಕೂರಿಸಲಾಗಿತ್ತು. ಆದರೆ ಕಾಂಗ್ರೆಸ್ ನ ಎಂ.ನಾರಾಯಣಸ್ವಾಮಿ, ನಜೀರ್ ಅಹ್ಮದ್ ಮತ್ತಿತರರು ಸಭಾಪತಿ ಪೀಠದಲ್ಲಿ ಕುಳಿತಿದ್ದ ಉಪ ಸಭಾಪತಿ ಅವರ ಮೇಲೆ ಹಲ್ಲೆ ಮಾಡಿ ಕತ್ತು ಹಿಡಿದು ಎಳೆದು ಕೆಳಗೆ ಇಳಿಸಿದ್ದಾರೆ.  ಕಲಾಪವು ಕ್ರಮಬದ್ಧವಾಗಿಲ್ಲದ ವೇಳೆ ಪ್ರವೇಶಿಸಿದ ಸಭಾಪತಿ ತರಾತುರಿಯಲ್ಲಿ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ. ಸಭಾಪತಿ ವಿರುದ್ಧ ಅವಿಶ್ವಾಸ ಮಂಡಿಸಿದ್ದ ಅವಿಶ್ವಾಸ ನಿರ್ಣಯ ತಿರಸ್ಕೃತವಾಗಿದೆ ಎಂದು ಯಾರೋ ಕೆಲವರಿಗೆ ಮಾಹಿತಿ ನೀಡಿದ್ದು, ನಿರ್ದಿಷ್ಟ ಆರೋಪಗಳಿದ್ದರೂ ಸ್ಪಷ್ಟವಾಗಿಲ್ಲ ಎಂಬ ಕಾರಣ ನೀಡಿದ್ದಾರೆ ಎಂದು ನಿಯೋಗ ದೂರಿನಲ್ಲಿ ವಿವರಿಸಿದೆ.

ರಾಜ್ಯಪಾಲರ ಸೂಚನೆಯಂತೆ ಮುಂದಿನ ನಡೆ

ರಾಜ್ಯಪಾಲರ ಸೂಚನೆ ನಂತರ ಮುಂದಿನ ನಡೆಯ ಬಗ್ಗೆ ತೀರ್ವನಿಸೋಣ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ‘ಕಾವೇರಿ’ ನಿವಾಸಕ್ಕೆ ಆಗಮಿಸಿದ್ದ ಸಚಿವರು, ರಾಜ್ಯಪಾಲರ ಭೇಟಿಯ ವಿವರಗಳನ್ನು ನೀಡಿ, ಮುಂದಿನ ನಡೆಯ ಕುರಿತು ರ್ಚಚಿಸಿದರು. ಸಭಾಪತಿ ಅವರನ್ನು ಕರೆಯಿಸಿಕೊಂಡು ಸದನದಲ್ಲಿ ನಡೆದ ಗಲಾಟೆಯ ಕುರಿತು ರಾಜ್ಯಪಾಲರು ಮಾಹಿತಿ ಪಡೆದ ನಂತರ ಮುಂದಿನ ನಿರ್ಧಾರಕ್ಕೆ ಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net