

ಚಿಕ್ಕಬಳ್ಳಾಪುರ: ರಾಕ್ಷಸರ ಆಳ್ವಿಕೆಯಲ್ಲಿ ಕರ್ನಾಟಕ ಸೊರಗುತ್ತಿದೆ ಎಂದು ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಚಿಂತಾಮಣಿ ನಗರದಲ್ಲಿ ಜನರೊಂದಿಗೆ ಜನತಾದಳ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಒಂದೆಡೆ ಗ್ಯಾರಂಟಿ ಯೋಜನೆ ನೆಪದಲ್ಲಿ ರಾಜ್ಯವನ್ನು ದಿವಾಳಿಯನ್ನಾಗಿಸಲಾಗುತ್ತಿದೆ. ಹಾಗೆಯೇ ಕಮೀಷನ್ ದಂಧೆ, ಭ್ರಷ್ಟಾಚಾರ, ದುರಾಡಳಿತದ ಮೂಲಕ ರಾಕ್ಷಸ ಆಳ್ವಿಕೆಯನ್ನು ನಡೆಸುತ್ತಿದ್ದಾರೆ. ಇದನ್ನು ಈಗ ಜನರ ಮುಂದಿಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ತೀವ್ರ ಹೋರಾಟ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಮಾಜಿ ಶಾಸಕ ಎಂ.ಕೃಷ್ಣಾ ರೆಡ್ಡಿ ಮಾತನಾಡಿ, ಸಾಲದ ಪ್ರಮಾಣ ಹೆಚ್ಚಳ ಎತ್ತಿನಹೊಳೆ ಯೋಜನೆಯು ಲೂಟಿ ಹೊಡೆಯಲು ಜೀವಂತವಾಗಿಟ್ಟಿದ್ದು ಈಗಾಗಲೇ ಖರ್ಚಾಗಿರುವ ಹಣದ ಜತೆಗೆ ಇನ್ನೂ ೧೦ ಸಾವಿರ ಕೋಟಿ ರೂ ಖರ್ಚು ಮಾಡಿದರೂ ನೀರು ಬರುವುದಿಲ್ಲ. ಮೇಕೆದಾಟು ಯೋಜನೆ ಜಾರಿಗಾಗಿ ಬೃಹತ್ ರ್ಯಾಲಿ ನಡೆಸಿದ್ದ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ ಗಿಮಿಕ್ ರಾಜಕಾರಣದಲ್ಲಿ ತೊಡಗಿದೆ. ಗ್ಯಾರಂಟಿ ಯೋಜನೆಗಳ ನೆಪದಲ್ಲಿ ಅಭಿವೃದ್ಧಿಯನ್ನು ಪಾತಾಳಕ್ಕಿಳಿಸಲಾಗುತ್ತಿದೆ. ರಾಜ್ಯದ ಸಾಲದ ಪ್ರಮಾಣವು ಹೆಚ್ಚಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಈ ಸಂದರ್ಭದಲ್ಲಿ ಸಂಸದ ಮಲ್ಲೇಶ್, ಶಾಸಕ ವೆಂಕಟಶಿವಾರೆಡ್ಡಿ ಮತ್ತಿತರರು ಇದ್ದರು.
*ಕುರಿ ಕೊಡುಗೆ, ಬೃಹತ್ ರ್ಯಾಲಿ
ಕುರುಬ ಸಮುದಾಯದ ಮುಖಂಡರು ನಿಖಿಲ್ ಕುಮಾರಸ್ವಾಮಿಗೆ ಕುರಿಯನ್ನು ಕೊಡುಗೆಯಾಗಿ ನೀಡಿದರು. ಕಂಬಳವನ್ನು ಹಾಕಿ, ಸನ್ಮಾನಿಸಿದರು. ಇದಕ್ಕೂ ಮೊದಲು ಜೆಡಿಎಸ್ ನಾಯಕರು ಕೈವಾರದ ಯೋಗಿ ನಾರೇಯಣ ಮಠಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದರು. ಜೆಡಿಎಸ್ ಕಾರ್ಯಕರ್ತರಿಗೆ ವಿಶೇಷವಾಗಿ ಮೀಸಲಿಟ್ಟಿದ್ದ ಬಾಬುಲಾಲ್ ಟೀ ಸ್ಟಾಲ್‌ನಲ್ಲಿ ನಿಖಿಲ್ ಸೇರಿದಂತೆ ನಾಯಕರು ಟೀ ಸವಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಕಾರ್ಯಕರ್ತರೊಂದಿಗೆ ಬೃಹತ್ ರ್ಯಾಲಿಯನ್ನು ನಡೆಸಿದರು.
*ಬಾಲ್ಯದ ಸ್ಮರಣೆ
ಚಿಂತಾಮಣಿ ತಾಲೂಕಿನ ತಳಗವಾರದಲ್ಲಿ ಬಾಲ್ಯವನ್ನು ಕಳೆದಿರುವುದು, ಈ ಭಾಗದಲ್ಲಿ ತೆಲುಗು ಮಿಶ್ರಿತ ಕನ್ನಡದಲ್ಲಿ ಮಾತನಾಡುವುದು, ನಾಟಿ ಕೋಳಿ ಸಾಕಾಣೆ ಹಾಗೂ ಸಾಗಾಣೆ, ಭೋಜನ ಸವಿದ ಬಗ್ಗೆ ನಿಖಿಲ್ ಕುಮಾರಸ್ವಾಮಿ ಸ್ಮರಿಸಿದರು.