

ಬೆಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯು ಸಂಗೀತ ಮತ್ತು ನೃತ್ಯ ಕ್ಷೇತ್ರದಲ್ಲಿನ ಗಣನೀಯ ಸೇವೆ ಸಲ್ಲಿಸಿದ ಕಲಾವಿದರಿಗೆ ನೀಡುವ ‘ಕರ್ನಾಟಕ ಕಲಾಶ್ರೀ ಪ್ರಶಸ್ತಿ’ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿದೆ.
ಅಕಾಡೆಮಿ ನೀಡುವ 2023-24ನೇ ಸಾಲಿನ ‘ಗೌರವ ಪ್ರಶಸ್ತಿ’ ವಿಭಾಗದಲ್ಲಿ ಡಿ.ಕುಮಾರದಾಸ್ (ಬಳ್ಳಾರಿ) ಹಾಗೂ ಸುಗಮ ಸಂಗೀತ ವಿಭಾಗದಲ್ಲಿ ಅಂಬಯ್ಯ ನುಲಿ (ರಾಯಚೂರು) ಭಾಜನರಾಗಿದ್ದಾರೆ. ಪ್ರಶಸ್ತಿಯು ತಲಾ 50 ಸಾವಿರ ರೂ. ಗೌರವಧನ ಹಾಗೂ ವಾರ್ಷಿಕ ಪ್ರಶಸ್ತಿಯು ತಲಾ 25 ಸಾವಿರ ರೂ. ಗೌರವಧನದೊಂದಿಗೆ ಪ್ರಶಸ್ತಿ ಲಕ ಒಳಗೊಂಡಿದೆ.
ವಾರ್ಷಿಕ ಪ್ರಶಸ್ತಿ ಪುರಸ್ಕೃತರ ವಿವರ: ಕರ್ನಾಟಕ ಸಂಗೀತ ವಿಭಾಗ - ಬೆಂಗಳೂರಿನ ಪದ್ಮಾ ಗುರುದತ್ (ಹಾಡುಗಾರಿಕೆ), ಮೈಸೂರಿನ ರೇವತಿ ಕಾಮತ್ (ವೀಣೆ), ಕೋಲಾರದ ವಿ.ರಮೇಶ್ (ನಾದಸ್ವರ), ಮಂಗಳೂರಿನ ಕದ್ರಿ ರಮೇಶ್ ನಾಥ್ (ಸ್ಯಾಕ್ಸೋಫೋನ್) ಹಾಗೂ ಹಿಂದೂಸ್ತಾನಿ ಸಂಗೀತ ವಿಭಾಗದಲ್ಲಿ ಕೊಪ್ಪಳದ ವಿರೂಪಾಕ್ಷ ರೆಡ್ಡಿ ಓಣಿಮನಿ (ಗಾಯನ), ಧಾರವಾಡದ ಶಫೀಖಾನ್ (ಸಿತಾರ್) ಮತ್ತು ಹುಬ್ಬಳ್ಳಿಯ ಸತೀಶ್ ಹಂಪಿಹೋಳಿ (ತಬಲ) ಆಯ್ಕೆಯಾಗಿದ್ದಾರೆ.
ನೃತ್ಯ ವಿಭಾಗದಲ್ಲಿ ಬೆಂಗಳೂರಿನ ಸವಿತಾ ಅರುಣ, ಮಾಲಾ ಶಶಿಕಾಂತ್ ಮತ್ತು ಶರ್ಮಿಳಾ ಮುಖರ್ಜಿ ಹಾಗೂ ಆನೇಕಲ್ನ ಸಯ್ಯದ್ ಸಲಾವುದ್ದೀನ್ ಪಾಷಾ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸುಗಮ ಸಂಗೀತ ವಿಭಾಗ - ಬೆಂಗಳೂರಿನ ಆನಂದ ಮಾದಲಗೆರೆ, ಕಥಾಕೀರ್ತನ ವಿಭಾಗದಲ್ಲಿ ಮಂಡ್ಯದ ಎಸ್.ಎಂ. ನಾಗಾರಾಜಾಚಾರ್, ಗಮಕ ವಿಭಾಗದಲ್ಲಿ ಬೆಂಗಳೂರಿನ ಜಿ.ಎಸ್. ನಾರಾಯಣ, ಹೊರದೇಶ ಕನ್ನಡ ಕಲಾವಿದ ವಿಭಾಗದಲ್ಲಿ ಅಮೆರಿಕದ ಕೆ.ಆರ್.ಎಸ್. ಪ್ರಸನ್ನ (ಭರತನಾಟ್ಯ) ಹಾಗೂ ಸಂಘ-ಸಂಸ್ಥೆ ವಿಭಾಗದಲ್ಲಿ ಬೆಂಗಳೂರಿನ ಶ್ರೀವಾಣಿ ಸ್ಕೂಲ್ ಎಜುಕೇಶನ್ ಟ್ರಸ್ಟ್ ಅನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಅಕಾಡೆಮಿಯ ಅಧ್ಯಕ್ಷೆ ಶುಭ ಧನಂಜಯ ಅಧ್ಯಕ್ಷತೆಯಲ್ಲಿ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದ್ದು, ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗುವುದು ಎಂದು ಅಕಾಡೆಮಿ ರಿಜಿಸ್ಟ್ರಾರ್ ತಿಳಿಸಿದ್ದಾರೆ.