

ಮೈಸೂರು: ಎಂಇಎಸ್ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ನಗರದ ಗಾಂಧಿ ಚೌಕದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
ಎಂಇಎಸ್ ಕಾರ್ಯಕರ್ತರು ರಾಜ್ಯದಲ್ಲಿ ಪುಂಡಾಟ ನಡೆಸುತ್ತಿದ್ದಾರೆ. ಬೆಳಗಾವಿಯಲ್ಲಿ ಕನ್ನಡ ಧ್ವಜವನ್ನು ಸುಟ್ಟು ಉದ್ವಿಗ್ನ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡಿಗರ ಆಸ್ತಿಪಾಸ್ತಿ ನಾಶ ಮಾಡುತ್ತಿದ್ದಾರೆ. ಇಷ್ಟಾದರೂ ಎಂಇಎಸ್ ಕಾರ್ಯಕರ್ತರ ವಿರುದ್ಧ ಏನು ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ವೇದಿಕೆ ರಾಜ್ಯಾಧ್ಯಕ್ಷ ಸೋಮೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರ ಕೂಡಲೇ ಎಂಇಎಸ್ ಕಾರ್ಯಕರ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೆ ಹೋದರೆ ಉಗ್ರ ಹೋರಾಟ ನಡೆಸಲಾಗುವುದು. ಕೂಡಲೇ ಎಂಇಎಸ್ ಪುಂಡರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ವೇದಿಕೆ ಪದಾಧಿಕಾರಿಗಳಾದ ಹೊನ್ನೇಗೌಡ, ಎಲ್. ರೇವಣ್ಣ, ಬಸವರಾಜಪ್ಪ, ವೆಂಕಟೇಶ್, ಕೃಷ್ಣಮಹಾದೇವು ಇತರರು ಪಾಲ್ಗೊಂಡಿದ್ದರು.