ಕೈ ಕಮಾಂಡ್‌ಗೆ ಕರ್ನಾಟಕವೇ ಎಟಿಎಂ; ಸಂಸದ ರಮೇಶ ಜಿಗಜಿಣಗಿ ಲೇವಡಿ

ramesh jigajinagi
Published on

ವಿಜಯಪುರ: ಕಾಂಗ್ರೆಸ್ ಹೈಕಮಾಂಡ್‌ಗೆ ಕರ್ನಾಟಕ ಸರ್ಕಾರ ‘ಎಟಿಎಂ’ ಆಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಲೇವಡಿ ಮಾಡಿದರು.

ದೇಶದ ಯಾವುದೇ ರಾಜ್ಯಗಳಲ್ಲಿ ಚುನಾವಣೆ ಆರಂಭಗೊಳ್ಳಲಿ ಕಾಂಗ್ರೆಸ್ ನಾಯಕರು ಕರ್ನಾಟಕದತ್ತ ಧಾವಿಸುತ್ತಿದ್ದಾರೆ. ಈ ಹಿಂದೆ ಮಹಾರಾಷ್ಟ್ರ ಚುನಾವಣೆ ಸಂದರ್ಭ ರಾಜ್ಯಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ ಇದೀಗ ಬಿಹಾರ ಚುನಾವಣೆ ಆಗಮಿಸುತ್ತಿದ್ದಂತೆ ರಾಜ್ಯಕ್ಕೆ ಧಾವಿಸಿದ್ದಾರೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲಿ ಶಾಸಕರ ಸಭೆ ನಡೆಸುತ್ತಾರೆಂದರೆ ಏನರ್ಥ? ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಪ್ರಶ್ನಿಸಿದರು.

ಕಾಂಗ್ರೆಸ್ ಸಂಸಾರ ಕೆಟ್ಟಿದೆ ಎಂಬುದಕ್ಕೆ ಸಿಎಂ ಹಾಗೂ ಡಿಸಿಎಂ ಅನುಪಸ್ಥಿತಿಯಲ್ಲಿ ಸುರ್ಜೆವಾಲಾ ಶಾಸಕರ ಸಭೆ ನಡೆಸುತ್ತಿರುವುದೇ ಸಾಕ್ಷಿ. ಇದೊಂದು ಕೆಟ್ಟ ಪರಂಪರೆ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಮಾಡಬೇಕಾದ ಕೆಲಸ ಸುರ್ಜೆವಾಲಾ ಮಾಡುತ್ತಿದ್ದಾರೆ. ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಿರುವ ಶಾಸಕರಿಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯ ಮೇಲೆ ಭರವಸೆ ಹೊರಟು ಹೋಗಿದೆ ಎಂಬುದು ಇದರಿಂದಲೇ ಗೊತ್ತಾಗಲಿದೆ. ಇಂಥ ದುರಾವಸ್ಥೆ ಕರ್ನಾಟಕದ ಜನತೆ ಎಂದೂ ಕಂಡಿರಲಿಲ್ಲ ಎಂದರು.

ಅನ್ಯ ರಾಜ್ಯಗಳ ಚುನಾವಣೆಗಾಗಿ ಕರ್ನಾಟಕ ಸರ್ಕಾರದಿಂದ ಭ್ರಷ್ಟಾಚಾರದ ಮೂಲಕ ಹಣ ಪಡೆಯುವ ಒತ್ತಡದ ತಂತ್ರ ನಡೆದಿದೆ. ಮಂತ್ರಿಗಳ, ಉಪಮುಖ್ಯಮಂತ್ರಿ, ಮುಖ್ಯಮಂತ್ರಿಗಳ ಮೇಲೆ ಒಂದು ಒತ್ತಡ ನಿರ್ಮಾಣ ಮಾಡಿ ಕರ್ನಾಟಕದ ಸರ್ಕಾರವನ್ನು ಎಟಿಎಂ ಮಾಡಿಕೊಳ್ಳಲಾಗುತ್ತಿದೆ ಎಂಬ ಗುಮಾನಿ ಇದೆ. ಲೋಕಸಭಾ ಚುನಾವಣೆಯಲ್ಲಿ ವಾಲ್ಮೀಕಿ ನಿಗಮದ ಮೂಲಕ ಭ್ರಷ್ಟಾಚಾರ ಎಸಗೆ ಹಣ ಬಳಸಿಕೊಂಡಿರುವುದು ಸಿಬಿಐ ತನಿಖೆ ಆಗುತ್ತಿದೆ. ಮಹಾರಾಷ್ಟ್ರ ಚುನಾವಣೆಯಲ್ಲೂ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿರುವುದರ ಬಗ್ಗೆ ಆರೋಪಗಳಿದ್ದು, ಈಗ ಬಿಹಾರ ಚುನಾವಣೆ ಬಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರನ್ನು ಬ್ಲಾಕ್‌ಮೇಲ್ ಮಾಡಿ ಹಣಕ್ಕಾಗಿ ಒತ್ತಡ ನಿರ್ಮಾಣ ಮಾಡುತ್ತಿರುವ ಚರ್ಚೆ ಜೋರಾಗಿದ ಎಂದರು.

ಕರ್ನಾಟಕವನ್ನು ದಿವಾಳಿ ಅಂಚಿಗೆ ತಳ್ಳಿರುವ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ಬಿಡಿಗಾಸು ಕೊಡುತ್ತಿಲ್ಲ. ಶಾಸಕರ ಕರೆಯೂ ಸ್ವೀಕರಿಸುತ್ತಿಲ್ಲ. ಆ ಕಾರಣಕ್ಕಾಗಿ ಶಾಸಕರು ಹಾಗೂ ಸರ್ಕಾರದ ಮಧ್ಯೆ ಕಂದಕ ನಿರ್ಮಾಣವಾಗಿದೆ. ಯಾವ ಶಾಸಕರ ಮತಕ್ಷೇತ್ರದ ಬೇಡಿಕೆಯನ್ನೂ ಪೂರೈಸಲು ಆಗದಷ್ಟು ಹೀನಾಯ ಸ್ಥಿತಿಯಲ್ಲಿ ಮಂತ್ರಿಗಳು ಉಪಮುಖ್ಯಮಂತ್ರಿಗಳು, ಮುಖ್ಯಮಂತ್ರಿಗಳು ಇದ್ದಾರೆ. ಒಂದು ರೀತಿ ಇಡೀ ಕಾಂಗ್ರೆಸ್ ಹತಾಶೆಯಲ್ಲಿ ಬಿದ್ದಿದೆ. ಈ ಹತಾಶೆ ದುರ್ಲಾಭವನ್ನು ಬಿಹಾರ ಚುನಾವಣೆಗಾಗಿ ಕಾಂಗ್ರೆಸ್ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದರು.

ಈ ಹಿಂದೆ ಎಸ್.ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ, ಎಸ್.ಎಂ. ಕೃಷ್ಣಾ ಮತ್ತಿತರರು ಸಿಎಂ ಆಗಿದ್ದಾಗ ಗೌರದಿಂದ ನಡೆದುಕೊಂಡಿದ್ದರು. ಆದರೆ, ಸಿದ್ಧರಾಮಯ್ಯ ಅವಧಿಯಲ್ಲಿ ಗೌರವ ಮಣ್ಣು ಪಾಲಾಗುತ್ತಿದೆ. ಸರ್ಕಾರ ನಡೆಸುವುದೇ ದೊಡ್ಡ ಕೆಲಸ ಅಲ್ಲ; ಗೌರಯುತವಾಗಿ ಮತ್ತು ಮಾದರಿಯಾಗಿ ನಡೆದುಕೊಳ್ಳಬೇಕು. ಮಂತ್ರಿಗಳು ನೇರವಾಗಿ ವ್ಯವಹಾರಕ್ಕೆ ಇಳಿದಿದ್ದಾರೆ. ಬಿಜೆಪಿ ಆಡಳಿತಾವಧಿಯಲ್ಲಿ ಶೇ.40 ರಷ್ಟು ಕಮೀಷನ್ ಆರೋಪ ಮಾಡುತ್ತಿದ್ದ ಕಾಂಗ್ರೆಸ್ಸಿಗರು ಇಂದು ಪೂರ್ತಿ ಹಣ ನುಂಗುತ್ತಿದ್ದಾರೆಂದು ಸಂಸದ ಜಿಗಜಿಣಗಿ ಆಪಾದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net