ವಿದ್ಯುತ್​ ಉತ್ಪಾದನೆಯಲ್ಲಿ ರಾಜ್ಯ ಸ್ವಾವಲಂಬಿ

Sudhee_23_KPCL_56th_Foundation_Day_@_Jnana_Jyothi_Auditorium (3)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಕರ್ನಾಟಕ ವಿದ್ಯುತ್​ ನಿಗಮ ನಿಯಮಿತ(ಕೆಪಿಸಿಎಲ್​)ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶ್ರೀ ನೇಮಕಾತಿ ಮಾಡುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ನಗರದ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೆಪಿಸಿಎಲ್​ನ 56ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ವಿದ್ಯುತ್​ ಉತ್ಪಾದನೆಯಲ್ಲಿ ರಾಜ್ಯ ಈಗ ಸ್ವಾವಲಂಭಿಯಾಗಿದ್ದು, ಪವನ, ಸೌರ, ಉಷ್ಣ, ಜಲ ವಿದ್ಯುತ್​ ಉತ್ಪಾದನೆ ಜತೆಗೆ ತ್ಯಾಜ್ಯದಿಂದಲೂ ವಿದ್ಯುತ್​ ಉತ್ಪಾದನೆ ಮಾಡುತ್ತಾ ದೇಶದಲ್ಲೇ ಪ್ರಮುಖ ಸ್ಥಾನದಲ್ಲಿದ್ದು ಸ್ವಾವಲಂಬನೆ ಸಾಧಿಸಿದ್ದೇವೆ. 60 ಸಾವಿರ ಮೆ.ವ್ಯಾ ಉತ್ಪಾದನೆ ಮಾಡುವ ಗುರಿ ಎಡೆಗೆ ನಾವು ಸಾಗುತ್ತಿದ್ದೇವೆ ಎಂದರು.

ಸದ್ಯ ರಾಜ್ಯದಲ್ಲಿ ವಿದ್ಯುತ್​ ಇಲ್ಲದ ಗ್ರಾಮವೇ ಇಲ್ಲ. 746 ಮೆಗಾ ವ್ಯಾಟ್​ ಉತ್ಪಾದನೆಯಿಂದ ಪ್ರಾರಂಭಗೊಂಡು ಇದೀಗ 9120 ಮೆಗಾ ವ್ಯಾಟ್​ ವರೆಗೆ ಉತ್ಪಾದನಾ ಸಾಮರ್ಥ್ಯ ಹೆಚ್ಚಿರುವುದು ಕೆಪಿಸಿಎಲ್​ನ ಸಾಧನೆಯಾಗಿದೆ. ಇದಕ್ಕೆ ಈ ಸಂಸ್ಥೆಯ ಎಲ್ಲ ಅಧಿಕಾರಿ, ಸಿಬ್ಬಂದಿ ವರ್ಗದ ಶ್ರಮ ಕಾರಣ ಎಂದು ಶ್ಲಾನೆ ಮಾಡಿದರು.

ಇಂಧನ ಸಚಿವ ಕೆ.ಜೆ.ಜಾರ್ಜ್​ ಮಾತನಾಡಿ, ರೈತರು ಸುಖವಾಗಿದ್ದರೆ ರಾಜ್ಯವು ಸುಭೀಕ್ಷವಾಗಿರುತ್ತದೆ. ನಮ್ಮ ಸರ್ಕಾರ ಬಂದ ಬಳಿಕ ರೈತರ ಪಂಪ್​ಸೆಟ್​ಗಿಳಿಗೆ 7 ಗಂಟೆ ವಿದ್ಯುತ್​ ನೀಡಿದ್ದೇವೆ. ಜತೆಗೆ ಸಬ್ಸಿಡಿಯನ್ನೂ ನೀಡಿದ್ದೇವೆ. 2035ರ ವೇಳೆಗೆ 35 ಸಾವಿರಕ್ಕೂ ಅಧಿಕ ವಿದ್ಯುತ್​ ಉತ್ಪಾದನಾ ಸಮಾರ್ಥ್ಯ ಹೆಚ್ಚಿಸುವುದು ನಮ್ಮ ಉದ್ದೇಶ. ಈಗಾಗಲೇ ಶರಾವತಿಯಲ್ಲಿ ಪಂಪ್​ ಸ್ಟೋರೇಜ್​ ಯೋಜನೆಗಳನ್ನು ಹಾಕಿದ್ದು, ವಿದ್ಯುತ್​ ಕೊರತೆ ಇರುವ ಸಂದರ್ಭಗಳಲ್ಲಿ ಇದು ಉಪಯೋಗಕ್ಕೆ ಬರಲಿದೆ ಎಂದರು.

ಇಂಧನ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್​ ಗುಪ್ತ ಮಾತನಾಡಿ, ನವೀಕರಿಸಬಹುದಾದ ಮೂಲಗಳಿಂದ ವಿದ್ಯುತ್​ ಉತ್ಪಾದನೆಗೆ ಒತ್ತು ನೀಡುತ್ತಿದ್ದೇವೆ. ಈ ಬಾರಿ ಉತ್ತಮ ಮಳೆಯಿಂದಾಗಿ ಜಲ ವಿದ್ಯುತ್​ ಉತ್ಪಾದನೆ ಅಧಿಕವಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ 25 ವರ್ಷಕ್ಕೂ ಅಧಿಕ ಸೇವೆ ಸಲ್ಲಿಸಿದ ಉದ್ಯೋಗಿಗಳನ್ನು ಸನ್ಮಾನಿಸಲಾಯಿತು. ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿಯಲ್ಲಿ ಶೇ.90ಕ್ಕಿಂತ ಅಧಿಕ ಅಂಕಗಳಿಸಿದ ಸಂಸ್ಥೆಯ ಉದ್ಯೋಗಿಗಳ ಮಕ್ಕಳಿಗೆ 3 ಗ್ರಾಂ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಕೆಪಿಸಿಎಲ್​ ಹಣಕಾಸು ನಿರ್ದೇಶಕ ಸಿ.ಆರ್​.ನಾಗರಾಜ್​, ತಾಂತ್ರಿಕ ನಿರ್ದೇಶಕ ಎಸ್​.ಕೃಷ್ಣಮೂರ್ತಿ ಮತ್ತಿತರರು ಇದ್ದರು.

ನಾವು ಓದುವಾಗ ಊರಲ್ಲಿ ಕರೆಂಟ್​ ಇರಲಿಲ್ಲ. ಸೀಮೆಎಣ್ಣೆ ದೀಪದಲ್ಲಿ ಓದಿ ಮೇಲೆ ಬಂದೆವು. ನಾನು 8ನೇ ತರಗತಿಗೆ ಬಂದಾಗ ಊರಿಗೆ ಕರೆಂಟ್​ ಬಂತು. ಈಗ ವರ್ಷಕ್ಕೆ 20 ಸಾವಿರ ಕೋಟಿ ರೂಪಾಯಿ ಪಂಪ್​ಸೆಟ್​ ಸಬ್ಸಿಡಿ ಹಣವನ್ನು ರೈತರ ಪರವಾಗಿ ಸರ್ಕಾರ ಕೊಡುತ್ತಿದೆ. ಕೆಪಿಸಿಎಲ್​ ನೌಕರರ ಶ್ರಮದಿಂದ ವಿದ್ಯುತ್​ ರೈತರಿಗೆ ತಲುಪುತ್ತಿದೆ. ಸಮಾಜದಲ್ಲಿ ಅಸಮಾನತೆ, ಜಾತಿ ವ್ಯವಸ್ಥೆ ಇದೆ. ಇದು ಹೋಗಬೇಕಾದರೆ ಎಲ್ಲರಿಗೂ ಆರ್ಥಿಕ ಶಕ್ತಿ ಬರಬೇಕು. ನಮಗೆ ಶಿಕ್ಷಣ ಸಿಕ್ಕ ಮೇಲೆ ವೈಚಾರಿಕತೆ, ವೈಜ್ಞಾನಿಕತೆ ಬೆಳೆಸಿಕೊಳ್ಳಬೇಕು. ಶಿಕ್ಷಣ ಕಲಿತವರೂ ಜಾತಿವಾದಿಗಳಾಗಿ, ದ್ವೇಷವಾದಿಗಳಾಗುತ್ತಿರುವುದು ವಿಷಾದನೀಯ. > ಸಿದ್ದರಾಮಯ್ಯ, ಮುಖ್ಯಮಂತ್ರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net