ಭೂಕಂಪದಿಂದ ಕರ್ನಾಟಕ ಸೇಫ್ ಆದರೂ ಜನರು ಎಚ್ಚರವಹಿಸಬೇಕು

Earthquake
Published on

ಕರ್ನಾಟಕದಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆ ತೀರಾ ಕಡಿಮೆ. ವಲಯ ಎರಡಕ್ಕೆ ಬರುವ ಕರ್ನಾಟಕ ಭೂಕಂಪದಿಂದ ಸುರಕ್ಷಿತ ರಾಜ್ಯವಾಗಿದೆ- ಇದು ಭೂಗರ್ಭ ಶಾಸ್ತ್ರಜ್ಞರ ಸ್ಪಷ್ಟನುಡಿ. ಶನಿವಾರ ನಡೆದ ವಿಜಯವಾಣಿ ಕ್ಲಬ್​ಹೌಸ್ ಸಂವಾದದಲ್ಲಿ ತಜ್ಞರು ಭೂಕಂಪ ಕುರಿತಾದ ಮಾಹಿತಿ, ವಹಿಸಬೇಕಾದ ಮುನ್ನೆಚ್ಚರಿಕೆಗಳನ್ನು ತಿಳಿಸಿಕೊಟ್ಟರು.

ಭೂ ವೈಜ್ಞಾನಿಕ ಸರ್ವೆಕ್ಷಣಾ ಇಲಾಖೆ ಈಗಾಗಲೇ ಭಾರತವನ್ನು ಐದು ವಲಯಗಳಾಗಿ ವಿಂಗಡಿಸಿದೆ. ಹಿಮಾಲಯ ಅಂಚಿನಲ್ಲಿರುವ ಪ್ರದೇಶಗಳು ವಲಯ 5ರಲ್ಲಿವೆ. ಈ ಪ್ರದೇಶಗಳಲ್ಲಿ ರಿಕ್ಟರ್ ಪ್ರಮಾಣದಲ್ಲಿ 9 ತೀವ್ರತೆಯ ಭೂಕಂಪವಾಗುವ ಸಾಧ್ಯತೆ ಇರುತ್ತದೆ. ಈ ವೇಳೆ ಇಡೀ ಪ್ರದೇಶಗಳಿಗೆ ಹಾನಿಯಾಗಬಹುದು. ವಲಯ 4ಕ್ಕೆ ಬರುವ ಪ್ರದೇಶಗಳಲ್ಲಿ 6ರಿಂದ 8ರ ಪ್ರಮಾಣದಲ್ಲಿ ಭೂಕಂಪವಾದರೆ ಹಾನಿಪ್ರಮಾಣ ಸ್ವಲ್ಪ ಹೆಚ್ಚು. ಅದೇರೀತಿ, ವಲಯ 3ಕ್ಕೆ ಬರುವ ಪ್ರದೇಶಗಳಲ್ಲಿ 4ರಿಂದ 5 ತೀವ್ರತೆಯ ಭೂಕಂಪವಾದರೆ ಹಾನಿಪ್ರಮಾಣ ತುಸು ಕಡಿಮೆ. ವಲಯಕ್ಕೆ 1 ಅಥವಾ 2ಕ್ಕೆ ಬರುವ ಪ್ರದೇಶಗಳಲ್ಲಿ ಭೂಕಂಪನದ ತೀವ್ರತೆ 4ಕ್ಕಿಂತ ಕಡಿಮೆ. ಈ ವೇಳೆ ಪಾತ್ರೆಗಳು ಹಾಗೂ ಗೋಡೆಗಳು ನಡುಗುತ್ತವೆ. ಈ ಪ್ರಮಾಣದಲ್ಲಿ ಭೂಕಂಪವಾದರೂ ಮಣ್ಣು ಮತ್ತು ಕಲ್ಲುಗಳಿಂದ ಕಟ್ಟಿರುವ ಮನೆಗಳು ಕುಸಿದು ಬೀಳುವ ಸಾಧ್ಯತೆಯಿರುತ್ತದೆ. ಆದರೆ, ತೀವ್ರತರ ಅನಾಹುತ ಉಂಟಾಗುವುದಿಲ್ಲ.

ಹೆಚ್ಚಿನ ಅಧ್ಯಯನ ಅಗತ್ಯ: ಕರಾವಳಿಯ ಕೆಲ ಪ್ರದೇಶಗಳು, ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ಪ್ರದೇಶಗಳು ವಲಯ 3ಕ್ಕೆ ಸೇರಿವೆ. ಕಲಬುರಗಿ, ಯಾದಗಿರಿ, ವಿಜಯಪುರ ಮತ್ತು ಬೀದರ್​ನಲ್ಲಿ ತೀವ್ರತರ ಭೂಕಂಪವಾಗುವುದಿಲ್ಲ. ಆದ್ದರಿಂದ, ಅಲ್ಲಿನ ಜನರು ಆತಂಕ ಪಡುವ ಅಗತ್ಯವಿಲ್ಲ. ಆದರೆ, ಎಚ್ಚರಿಕೆಯಿಂದಿರಬೇಕು. ಪದೇಪದೆ ಭೂಕಂಪವಾಗುವ ಪ್ರದೇಶಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಅಳವಾದ ಅಧ್ಯಯನ ನಡೆಯಬೇಕು. ಕೆಲ ಸಂದರ್ಭಗಳಲ್ಲಿ ಸುರಕ್ಷಿತ ವಲಯಗಳಲ್ಲಿಯೂ ಭೂಕಂಪದ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

| ಡಾ.ಬಿ.ಸಿ.ಪ್ರಭಾಕರ್, ಬೆಂಗಳೂರು ವಿಶ್ವವಿದ್ಯಾಲಯದ ಭೂಗರ್ಭ ಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ

# ಭೂಕಂಪನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಹೇಗೆ?

-ಎಲ್ಲೋ ಭೂಕಂಪ ಆಯಿತು ಎಂದ ಕೂಡಲೆ ನಮ್ಮಲೂ ಆಗುತ್ತದೆ ಎಂಬ ಆತಂಕ ಬೇಡ. ಬದಲಿಗೆ ಭೂಕಂಪನ ಆಗಿರುವ ಪ್ರದೇಶಗಳಲ್ಲಿ ಸ್ಥಳೀಯ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸಬೇಕು. ಭೂಕಂಪನ ಆದ ಸಂದರ್ಭದಲ್ಲಿ ಕೈಗೊಳ್ಳಬಹುದಾದ ಎಚ್ಚರಿಕೆ ಕ್ರಮಗಳ ಬಗ್ಗೆ ಅಧಿಕಾರಿಗಳು ಸ್ಥಳೀಯ ಶಿಕ್ಷಕರನ್ನು ಬಳಸಿಕೊಂಡು ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಬೇಕು.

# ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ಪದೇಪದೆ ಭೂಕಂಪನಕ್ಕೆ ಕಾರಣವೇನು?

-ಕಲಬುರಗಿ, ವಿಜಯಪುರ, ಬೆಳಗಾವಿ, ಬೀದರ್ ಜಿಲ್ಲೆಯಲ್ಲಿ ಬೆಸಾಲ್ಟ್ ಮತ್ತು ಸೆಗಮೆಂಟರಿ ಇವೆರಡರ ನಡುವೆ ಆಂತರಿಕವಾಗಿ ನಡೆಯುವ ಭೌತಿಕ ಮತ್ತು ರಾಸಾಯನಿಕ ಕ್ರಮಗಳು ಭೂಕಂಪನಕ್ಕೆ ಮೂಲ ಕಾರಣ. ಭೂಕಂಪನ ಮುಂದೆಯೂ ಸಂಭವಿಸುತ್ತದೆ. ಭೂಗರ್ಭಶಾಸ್ತ್ರದ ಪುರಾವೆ ಪ್ರಕಾರ ಹೇಳುವುದಾದರೆ ಭೂಮಿ ಇರುವವರೆಗೂ ಭೂಕಂಪನ ಆಗುತ್ತಲೇ ಇರುತ್ತದೆ. ಹಾಗಾಗಿ ಮನುಷ್ಯ ಭೂಕಂಪನವನ್ನು ತಡೆಯಲು ಸಾಧ್ಯವಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಮೂಲಕ ಅದರಿಂದ ಆಗುವ ಅಪಾಯಗಳಿಂದ ಪಾರಾಗಬಹುದು.

# ಭೂಕಂಪನ ನಿಯಂತ್ರಣಕ್ಕೆ ಜನರು ಯಾವ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು? ಮುಂದಿನ ಬದುಕು ಕಟ್ಟಿಕೊಳ್ಳಲು ಏನು ಮಾಡಬೇಕು?

-ಮುನ್ನೆಚ್ಚರಿಕೆ ಒಂದೇ ಪರಿಹಾರ. ಭೂಕಂಪನ ಸಂಭವಿಸಬಹುದಾದ ಪ್ರದೇಶಗಳನ್ನು 5 ಅಪಾಯಕಾರಿ ವಲಯಗಳನ್ನಾಗಿ ಗುರುತಿಸಲಾಗಿದೆ. ಸಿಸ್ಮಿಕ್ ವಲಯ 5ರಲ್ಲಿ ರಿಕ್ಟರ್ ಮಾಪಕ 8-9 ಇರುತ್ತದೆ. ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿಯಲ್ಲಿ ಮಾಪ್ ಡ್ರಿಲ್ ಮಾಡಲಾಗಿದೆ. ಅಂದರೆ ಭೂಕಂಪನ ಸಂಭವಿಸುವ ಸಮಯದಲ್ಲಿ ಸೈರನ್ ಕೂಗುತ್ತದೆ. ಇದರಿಂದ ಜನರು ಎಚ್ಚೆತ್ತುಕೊಳ್ಳಲು ಸಹಕಾರಿಯಾಗಲಿದೆ. ಗುವಾಹಟಿಯಲ್ಲಿ ಈಗಾಗಲೇ ಈ ಕ್ರಮಗಳು ಜಾರಿಯಲ್ಲಿವೆ. ಸೈರನ್ ಕೂಗು ಕೇಳಿಬಂದ ಸಂದರ್ಭದಲ್ಲಿ ಜನರು ಮನೆಯ ಒಳಗಿದ್ದರೆ ಅಪಾಯದಿಂದ ಪಾರಾಗಲು ಟಾರ್ಚ್ ಇಟ್ಟುಕೊಂಡಿರುಬೇಕು. ನೀರಿನ ವ್ಯವಸ್ಥೆ ಮಾಡಿಕೊಂಡಿರಬೇಕು. ಸೈರನ್ ಕೂಗುತ್ತಲೇ ಟೇಬಲ್ ಅಥವಾ ಮಂಚದ ಕೆಳಗೆ, ಇಲ್ಲವೆ ಯಾವುದೇ ಅಪಾಯ ಆಗದಂಥ ಮೂಲೆಗಳಲ್ಲಿ ಅಡಗಿಕೊಳ್ಳಬೇಕು. ಹಾಗೇನಾದರೂ ಅವಶೇಷಗಳಡಿ ಸಿಲುಕಿದರೆ ತಮ್ಮ ಇರುವಿಕೆಯನ್ನು ಸೂಚಿಸಲು ವಿಶಲ್ ಇಟ್ಟುಕೊಂಡಿರಬೇಕು. ಮುಂದೆ ಭೂಕಂಪನದಿಂದ ಆಗುವ ಅಪಾಯದಿಂದ ತಪ್ಪಿಸಿಕೊಳ್ಳುವ ತಂತ್ರಜ್ಞಾನ ಆಧಾರಿತ ಮನೆಗಳ ನಿರ್ವಣಕ್ಕೆ ಒತ್ತು ನೀಡಬೇಕು. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಆಗಬೇಕು.

ಗಡಿಕೇಶ್ವಾರದಲ್ಲಿ ಸಿಸ್ಮೋಮೀಟರ್

ಚಿಂಚೋಳಿ (ಕಲಬುರಗಿ): ಭೂಕಂಪ ಪೀಡಿತ ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಕೆಲ ಗ್ರಾಮಗಳಿಗೆ ಹೈದರಾಬಾದ್​ನ ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆಯ (ಎನ್​ಜಿಆರ್​ಐ) ವಿಜ್ಞಾನಿಗಳ ತಂಡ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು. ಮೇಲಿಂದ ಮೇಲೆ ಭೂಮಿಯಿಂದ ಜೋರಾದ ಶಬ್ದ ಕೇಳಿಸುತ್ತಿರುವುದರಿಂದ ಜನರ ಆತಂಕ ದೂರ ಮಾಡಲು ಮತ್ತು ಭೂಕಂಪನದ ತೀವ್ರತೆ ದಾಖಲಿಸಲು ಗಡಿಕೇಶ್ವಾರದಲ್ಲಿ ತಾತ್ಕಾಲಿಕವಾಗಿ ಸಿಸ್ಮೋಮೀಟರ್ ಸ್ಥಾಪಿಸಲಾಗಿದೆ. ಸಿಸ್ಮೋಮೀಟರ್ ಅಳವಡಿಸಿದ್ದರಿಂದ ಗಡಿಕೇಶ್ವಾರ ಮತ್ತು ಸುತ್ತಲಿನ ಗ್ರಾಮಗಳಲ್ಲಿ ಭೂಕಂಪ ಸಂಭವಿಸಿದ್ದಲ್ಲಿ ನೆಲದೊಳಗಿನ ಭೂಮಿಯ ಚಲನೆ ಮತ್ತು ಕಂಪನದ ಕುರಿತು ದಾಖಲಾಗಿ ನೇರವಾಗಿ ಹೈದರಾಬಾದ್​ನಲ್ಲಿರುವ ಎನ್​ಜಿಆರ್​ಐ ಸಂಸ್ಥೆಯ ಯಂತ್ರಗಳಿಗೆ ಮಾಹಿತಿ ರವಾನೆಯಾಗಲಿದೆ. ಇದನ್ನು ಆಧರಿಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿಜ್ಞಾನಿಗಳು ನಿರ್ಧರಿಸಲಿದ್ದಾರೆ. ಭೂ ವಿಜ್ಞಾನಿಗಳಾದ ಡಾ.ಸುರೇಶ್, ಡಾ.ಶಶಿಧರ ಜತೆ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಪ್ರಾಧಿಕಾರದ ಹಿರಿಯ ಭೂ ವಿಜ್ಞಾನಿ ಡಾ.ರಮೇಶ, ಕಿರಿಯ ವಿಜ್ಞಾನಿ ಡಾ.ಅಭಿನಯ, ಸಹಾಯಕ ವಿಜ್ಞಾನಿ ಅಣವೀರಪ್ಪ ಬಿರಾದರ ತಂಡದಲ್ಲಿದ್ದರು.

ಸಿಸ್ಮೋಮೀಟರ್ ಅಳವಡಿಸಿದ ನಂತರ ಮಧ್ಯಾಹ್ನ 12.25ಕ್ಕೆ ಭೂಮಿಯಲ್ಲಿ ಕಂಪನದ ಅನುಭವವಾಗಿದ್ದು, ಮಾಪನದಲ್ಲಿ 0.5 ತೀವ್ರತೆ ದಾಖಲಾಗಿದೆ.

| ಡಾ.ಶಶಿಧರ ಭೂ ವಿಜ್ಞಾನಿ

ಭೂಕಂಪಕ್ಕೆ ಕಾರಣವೇನು?

| ಡಾ.ಎಚ್.ಎಸ್.ಎಂ.ಪ್ರಕಾಶ್, ಭಾರತೀಯ ಭೂ ವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ ನಿವೃತ್ತ ಡೆಪ್ಯುಟಿ ಡೈರೆಕ್ಟರ್ ಜನರಲ್

ಭೂ ಚಿಪು್ಪಗಳ (ಕ್ರಸ್ಟಲ್ ಪ್ಲೇಟ್ಸ್ ) ಸರಿದಾಡುವಿಕೆಯಿಂದ ಭೂಕಂಪನ ಸಂಭವಿಸುತ್ತದೆ. ಸುಣ್ಣದ ಕಲ್ಲುನ್ನು ಪುಡಿ ಮಾಡಿ ಅಂದಾಜು ಒಂದು ಸಾವಿರ ಡಿಗ್ರಿ ಉಷ್ಣಾಂಶದಲ್ಲಿ ಕುದಿಸಿದಾಗ ಆ ಸುಣ್ಣ ಕ್ಯಾಲ್ಸಿಯಂ ಕಾಬೋರೇಟ್ ಇದ್ದಿದ್ದು, ಕ್ಯಾಲ್ಸಿಯಂ ಆಕ್ಸೆ ೖಡ್ ಆಗಿ ಪರಿವರ್ತನೆಯಾಗುತ್ತದೆ. ಬಳಿಕ ತಣ್ಣಗಾದ ಮೇಲೆ ಕ್ಯಾಲ್ಸಿಯಂ ಆಕ್ಸೆ ೖಡ್​ಗೆ ನೀರು ಹಾಕಿದರೆ ಮತ್ತೆ ಕುದಿಯುತ್ತದೆ. ಆಗ ಕ್ಯಾಲ್ಸಿಯಂ ಆಕ್ಸೆ ೖಡ್,ಕ್ಯಾಲ್ಸಿಯಂ ಹೈಡ್ರಾಕ್ಸೆ ೖಡ್ ಆಗಿ ಪರಿವರ್ತನೆಯಾಗುತ್ತದೆ. ಈ ವೇಳೆ ಸುಣ್ಣದ ವ್ಯಾಲ್ಯೂಮ್ ಕಡಿಮೆ ಆದಾಗ ದೊಡ್ಡ ಗ್ಯಾಪ್ ನಿರ್ವಣವಾಗಿ, ಒಂದಕ್ಕೊಂದು ಘರ್ಷಣೆ ಆಗುತ್ತವೆ. ಇದರಿಂದ ಎನರ್ಜಿ ಬಿಡುಗಡೆ ಆಗುತ್ತದೆ. ಇದೇ ಪ್ರಮಾಣದಲ್ಲಿ ಭೂಮಿಯ ಒಳಗಡೆ ಸುಣ್ಣದ ಕಲ್ಲು ಮೇಲಿನ ಲಾವರಸ ತಿಕ್ಕಾಟವಾದರೆ ಭೂಕಂಪ ಸಂಭವಿಸುತ್ತದೆ. ಸಣ್ಣ ಪ್ರಮಾಣದ ಕಂಪನಗಳಿಗೆ ಅನೇಕ ಕಾರಣಗಳಿವೆ. ಭೂಕಂಪ ಸಂಬಂಧ ರಿಕ್ಟರ್ ಮಾಪಕದಲ್ಲಿ 1ರಿಂದ 10 ಸ್ಕೇಲ್ ಮಾಡಲಾಗಿದೆ. 2.5ರ ತೀವ್ರತೆಯ ಭೂಕಂಪ ನಮ್ಮ ಗಮನಕ್ಕೆ ಬರುವುದಿಲ್ಲ. 3ರ ಪ್ರಮಾಣದಲ್ಲಿ ಭೂಕಂಪವಾದರೆ ಭೂಮಿ ಕಂಪನದ ಅನುಭವವಾಗುತ್ತದೆ. 4ರ ತೀವ್ರತೆಯಲ್ಲಿ ಭೂಕಂಪವಾದಾಗ ಗೋಡೆಗಳು ಬಿರುಕು ಬಿಡುತ್ತವೆ, ಪಾತ್ರೆಗಳು ಬೀಳುತ್ತವೆ. 5ರಿಂದ 6ರ ಪ್ರಮಾಣದಲ್ಲಿ ಸಂಭವಿಸಿದರೆ ಮನೆಗಳಿಗೆ ಹಾನಿಯಾಗುವ ಸಾಧ್ಯತೆ. ಅದರಂತೆ, 7ರಿಂದ 10ರವರೆಗೆ ಆದರೆ ದೊಡ್ಡ ಪ್ರಮಾಣದಲ್ಲಿ ಹಾನಿ.

ಜನರಲ್ಲಿ ಅರಿವು ಅಗತ್ಯ

ಕಲಬುರಗಿ ಜಿಲ್ಲೆಯ ಚಿಂಚೋಳಿ ವ್ಯಾಪ್ತಿಯ 25 ಗ್ರಾಮಗಳಲ್ಲಿ ಭೂಕಂಪದಿಂದ ಆತಂಕದ ವಾತಾವರಣ ನಿರ್ವಣವಾಗಿದೆ. ಹೀಗಾಗಿ, ಅಲ್ಲಿನ ಜನರು ಭಯದಿಂದ ತಮ್ಮ ಊರುಗಳನ್ನು ತೊರೆಯುತ್ತಿದ್ದಾರೆ. ಕೆಲವರು ಎಲ್ಲಿಗೂ ಹೋಗದೆ ಅಲ್ಲೇ ವಾಸಿಸುತ್ತಿದ್ದಾರೆ. ಹೀಗಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ. ಜತೆಗೆ, ಜಿಲ್ಲಾಡಳಿತ ಭೂಕಂಪದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಬೇಕಿದೆ.

ಅಧಿಕ ಮಳೆಯೂ ಕಾರಣ

ಅಧಿಕ ಮಳೆಯಿಂದ ಭೂಕಂಪ ಸಂಭವಿಸಬಹುದು. 2009, 2016 ಮತ್ತು 2021ರಲ್ಲಿ ಉತ್ತರ ಕರ್ನಾಟಕದ ಕೆಲ ಪ್ರದೇಶಗಳಿಗೆ ಭೇಟಿ ನೀಡಿದ್ದೆವು. ಆ ವೇಳೆ 3.5ರ ತೀವ್ರತೆಯಲ್ಲಿ ಭೂಕಂಪವಾಗಿತ್ತು. ಅಧಿಕ ಮಳೆಯ ನೀರು ಭೂಮಿಯ ಒಳಗಡೆ ಸೇರಿದಾಗ ಕೆಲ ಪ್ರದೇಶದಲ್ಲಿ ಭೂಕಂಪನದ ಶಬ್ದ ಬರುತ್ತದೆ. ಪ್ರಪಂಚದ ವಿವಿಧ ಪ್ರದೇಶಗಳ ಭೂ ರಚನೆ ಬೇರೆ ಬೇರೆ ರೀತಿಯಿದೆ. ಭೂಕಂಪ ಮತ್ತು ಜ್ವಾಲಮುಖಿಗಳಿಗೆ ಟೈಮ್ೇಬಲ್ ಇರುತ್ತದೆ. ಆ ಸಮಯದಲ್ಲಿ ಭೂಕಂಪವಾಗುತ್ತದೆ. 2 ಸಾವಿರ ವರ್ಷಗಳಲ್ಲಿ ಭಾರತದ ನಾನಾ ಭಾಗಗಳಲ್ಲಿ ಭೂಕಂಪ ಆಗಿರುವ ಪಟ್ಟಿಗಳನ್ನು ತಯಾರಿಸಿದ್ದೇನೆ. 1816ರಲ್ಲಿ ಬೆಂಗಳೂರಿನಲ್ಲಿ ಭೂಕಂಪವಾಗಿತ್ತು. ರಿಕ್ಟರ್ ಮಾಪಕದಲ್ಲಿ 6.1 ದಾಖಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net