ತಮಿಳುನಾಡು ತಿರುಗೇಟು, ಸಂಕಷ್ಟದಲ್ಲಿ ಕರ್ನಾಟಕ

hubballi cricket
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಇಲ್ಲಿ ನಡೆಯುತ್ತಿರುವ 23 ವಯೋಮಿತಿಯ ಕರ್ನಲ್ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಪ್ರವಾಸಿ ತಂಡ ತಮಿಳುನಾಡು ವಿರುದ್ಧ ಆತಿಥೇಯ ಕರ್ನಾಟಕ ಸಂಕಷ್ಟಕ್ಕೆ ಸಿಲುಕಿದೆ.

ರಾಜನಗರ ಕೆಎಸ್​ಸಿಎ ಮೈದಾನದಲ್ಲಿ ಮಂಗಳವಾರ 3ನೇ ದಿನದಾಟದ ಅಂತ್ಯಕ್ಕೆ ಕರ್ನಾಟಕ ಪ್ರಥಮ ಇನ್ನಿಂಗ್ಸ್​ನಲ್ಲಿ 42ರನ್ ಮೊತ್ತಕ್ಕೆ 3 ವಿಕೆಟ್ ಕಳೆದುಕೊಂಡಿದೆ. ತಮಿಳುನಾಡು ಪ್ರಥಮ ಇನ್ನಿಂಗ್ಸ್​ನಲ್ಲಿ 312ರನ್ ಗಳಿಸಿದೆ.

ಇಂದು ಬೆಳಗ್ಗೆ 4 ವಿಕೆಟ್​ಗೆ 165ರನ್ ಮೊತ್ತದಿಂದ ಆಟ ಮುಂದುವರಿಸಿದ ತಮಿಳುನಾಡು ತಂಡಕ್ಕೆ ವಿಕೆಟ್ ಕೀಪರ್ ಬ್ಯಾಟ್ಸಮನ್ ಎಸ್. ರಿತಿಕ್ ಈಶ್ವರನ್ (87ರನ್, 164 ಎಸೆತ, 8 ಬೌಂ., 2ಸಿ.) ಆಸರೆಯಾದರು. ಇವರಿಗೆ ಮಾಧವಪ್ರಸಾದ ಹಾಗೂ ಸನ್ನಿ ಉತ್ತಮ ಸಾಥ್ ನೀಡಿದ್ದರಿಂದ ಪ್ರವಾಸಿ ತಂಡದ ಮೊತ್ತ 300ರನ್ ಗಡಿ ದಾಟಿತು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಆತಿಥೇಯ ಕರ್ನಾಟಕ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ಮ್ಯಾಕ್ನೇಲ್ (8ರನ್) ಹಾಗೂ ಪ್ರಕರ ಚತುರ್ವೆದಿ (4) ಬೇಗನೇ ಔಟಾದರು. ವಿಶಾಲ ಓನತ್ ಸಹ ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ನಾಯಕ ಅನೀಶ್ವರ ಗೌತಮ್ (5) ಹಾಗೂ ಹರ್ಷಿಲ್ ಧರ್ವನಿ (6) ಬುಧವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಬುಧವಾರ ಪಂದ್ಯಕ್ಕೆ ಕೊನೆ ದಿನವಾಗಿದ್ದು, ಡ್ರಾ ನಿಶ್ಚಿತವಾಗಿದೆ. ಆದರೆ, ಇನ್ನಿಂಗ್ಸ್ ಮುನ್ನಡೆ ಸಾಧಿಸಲು ಕರ್ನಾಟಕ ಹೋರಾಟ ನಡೆಸಬೇಕಿದೆ. ಇಂದು ಮಧ್ಯಾಹ್ನ ಮಳೆಯಿಂದ 2 ತಾಸು ಆಟ ನಡೆಯಲಿಲ್ಲ.

ಸಂಕ್ಷಿಪ್ತ ಸ್ಕೋರ್

ತಮಿಳುನಾಡು: 97.2 ಓವರ್​ಗಳಲ್ಲಿ 312 (ಆರ್. ವಿಮಲಕುಮಾರ 82, ಎಸ್. ರಿತಿಕ್ ಈಶ್ವರನ್ 87, ಮಾಧವಪ್ರಸಾದ 27, ಸನ್ನಿ 24, ಶಶಿಕುಮಾರ ಕೆ. 83ಕ್ಕೆ 5, ಪರಾಸ್ ಗುರುಭಕ್ಷ 72ಕ್ಕೆ 4). ಕರ್ನಾಟಕ: 13 ಓವರ್​ಗಳಲ್ಲಿ 3 ವಿಕೆಟ್​ಗೆ 42 (ವಿಶಾಲ ಓನತ್ 15, ಸನ್ನಿ 16ಕ್ಕೆ 1, ಪಿ. ವಿಘ್ನೇಶ 3ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net