

ಶಿವಮೊಗ್ಗ: ರಾಷ್ಟ್ರಧ್ರೋಹಿ ಕೃತ್ಯ ರಾಜ್ಯದಲ್ಲಿ ನಡೆಯುತ್ತಿದೆ. ಕರ್ನಾಟಕ ಎಂದರೆ ಇಂಥವರಿಗೆ ಸ್ವರ್ಗ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆತಂಕ ವ್ಯಕ್ತಪಡಿಸಿದರು.
ಶಿವಮೊಗ್ಗದ ಹೊರವಲಯದ ರಾಗಿಗುಡ್ಡದ ಬಂಗಾರಪ್ಪ ಬಡಾವಣೆ ಗಣಪತಿ ವಿಗ್ರಹಕ್ಕೆ ಅಪಮಾನ ವಿಚಾರ ಗಮನಕ್ಕೆ ಬಂದಿದ್ದು, ಈ ಪ್ರಕರಣವನ್ನು ಗೃಹ ಸಚಿವರು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದರು. ಈಗಾಗಲೇ ಮಂಗಳೂರಿನ ಪ್ರಕರಣವನ್ನು ಕೂಡ ನಾವು ಗಮನಿಸಿದ್ದೇವೆ. ನಾವು ಏನೇ ಮಾಡಿದರೂ ಕಾಂಗ್ರೆಸ್ ಪಕ್ಷ ಬಚಾವ್ ಮಾಡುತ್ತದೆಂಬ ಭರವಸೆ ದೇಶದ್ರೋಹಿಗಳಿಗಿದೆ. ಯಾರು ಹೇಳುವವರು, ಕೇಳುವವರು ಇಲ್ಲ ಎಂಬುವ ಮನಸ್ಥಿತಿಗೆ ಅವರು ಬಂದಿದ್ದಾರೆ. ದುಷ್ಟ ಶಕ್ತಿಗಳಿಗೆ ರಾಜ್ಯ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ದೂರಿದರು.
ರಾಜ್ಯಾದ್ಯಂತ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾನೂನು ಸುವ್ಯವಸ್ಥೆ ಸರಿಯಾಗಿ ಇರಬಾರದು ಎಂಬುದು ಕೆಲ ದೇಶದ್ರೋಹಿಗಳ ಉದ್ದೇಶ. ಅವರಿಗೆ ಎರಡು ಧರ್ಮಗಳ ವಿರುದ್ಧ ಸಂಘರ್ಷ ನಡೆಯುತ್ತಲೇ ಇರಬೇಕು. ಈ ದುರುದ್ದೇಶದಿಂದಲೇ ಘಟನೆಗಳು ನಡೆಯುತ್ತಿವೆ ಎಂದು ಕಿಡಿಕಾರಿದರು.