

ಸುಂಟಿಕೊಪ್ಪ: ಕನ್ನಡ ನಾಡು, ನುಡಿ, ನೆಲ-ಜಲ ಸಂಸ್ಕೃತಿ-ಪರಂಪರೆ ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡಿದ್ದು, ಐತಿಹಾಸಿಕ ಸಾಂಸ್ಕೃತಿ ಶ್ರೀಮಂತಿಕೆಯಿಂದ ಇಡೀ ವಿಶ್ವದ ಗಮನ ಸೆಳೆದ ನಾಡು ಕರ್ನಾಟಕ ಎಂದು ಸುಂಟಿಕೊಪ್ಪ ಪದವಿಪೂರ್ವ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕಿ ಸುನಿತಾ ಗಿರೀಶ್ ತಿಳಿಸಿದರು.
ಶುಕ್ರವಾರ ಇಲ್ಲಿನ ಕನ್ನಡ ವೃತ್ತದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೇರವೇರಿಸಿ ಮುಖ್ಯ ಭಾಷಣ ಮಾಡಿದ ಅವರು, ಕರ್ನಾಟಕದಂತಹ ಪುಣ್ಯಭೂಮಿ ತಪ್ಪಿಸ್ಸಿನ ಭೂಮಿಯಲ್ಲಿ ಜನಿಸಿ ನಾವೆಲ್ಲ ಬಾಳುತ್ತಿರುವುದು ನಮ್ಮ ಸುದೈವ ಮತ್ತು ಪೂರ್ವ ಜನ್ಮದ ಪುಣ್ಯದ ಫಲ. ಇಂತಹ ನಾಡು, ನುಡಿ, ಸಂಸ್ಕೃತಿಗಾಗಿ ಕನ್ನಡ ನಾಡಿನ ಏಕೀಕರಣಕ್ಕಾಗಿ ಹೋರಾಡಿದಂತಹ ಮಹಾನು ಚೇತನಗಳನ್ನು ಸ್ಮರಿಸಿಕೊಳ್ಳುತ್ತಾ ಅವರಿಗೆ ನುಡಿ ನಮನ ಸಲ್ಲಿಸಿ ಶಿರಬಾಗಿ ನಮಿಸುವುದು ನಮ್ಮ ಆದ್ಯ ಕರ್ತವ್ಯ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಎಫ್.ಸಬಾಸ್ಟೀನ್ ವಹಿಸಿದ್ದರು. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನಿಲ್‌ಕುಮಾರ್, ಮಾಜಿ ಅಧ್ಯಕ್ಷ ಕ್ಲಾಡಿಯಸ್ ಲೋಬೋ, ಕನ್ನಡ ರಾಜ್ಯೋತ್ಸವದ ಶುಭಾಶಯ ನುಡಿಗಳನ್ನಾಡಿದರು.
ಕಳೆದ 28 ವರ್ಷಗಳ ಹಿಂದೆ ಸುಂಟಿಕೊಪ್ಪದಲ್ಲಿ ಕನ್ನಡ ವೃತ್ತವನ್ನು ಸ್ಥಾಪಿಸಲು ಶ್ರಮಿಸಿದ ಸುಂಟಿಕೊಪ್ಪ ಗ್ರಾಮ ಮಾಜಿ ಅಧ್ಯಕ್ಷ ಕ್ಲಾಡಿಯಸ್ ಲೋಬೋ ಅವರನ್ನು ಸನ್ಮಾನಿಸಲಾಯಿತು.
ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಯಶೋದರಾ ಪೂಜಾರಿ, ಕೆ.ಪಿ.ಜಗನ್ನಥ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾಗೇಶ ಪೂಜಾರಿ, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್, ಸದಸ್ಯರಾದ ಸೋಮನಾಥ್, ರಫಿಕ್ ಖಾನ್, ವಸಂತಿ, ಲೆಕ್ಕ ಪರಿಶೋಧಕಿ ಚಂದ್ರಕಲಾ, ಸುಂಟಿಕೊಪ್ಪ ನಾಡು ಗೌಡ ಸಮಾಜದ ಕಾರ್ಯದರ್ಶಿ ಕೌಶಿಕ್, ಬಿಲ್ಲವ ಸಮಾಜದ ಅಧ್ಯಕ್ಷ ಮಣಿ ಮುಖೇಶ್, ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಬಾಲಕೃಷ್ಣ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಗೀತಾ, ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಜೋವಿಟಾ ವಾಜ್, ತಲೆಹೊರೆ ಕನ್ನಡಾಭಿಮಾನಿ ಸಂಘದ ಅಧ್ಯಕ್ಷ ಸಂತೋಷ್, ಲಯನ್ಸ್ ಸಂಸ್ಥೆಯ ಅಧ್ಯಕ್ಷ ಶಶಾಂಕ್, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮತ್ತಿತರರು ಇದ್ದರು.