ರಾಜ್ಯದಲ್ಲಿ ಮಾಹಿತಿಗಾಗಿ 5 ಲಕ್ಷ ಅರ್ಜಿ ಬರುತ್ತಿವೆ : ನಿವೃತ್ತ ಮಾಹಿತಿ ಆಯುಕ್ತ ಡಾ.ಶೇಖರ ಹೇಳಿಕೆ

IMG-20230901-WA0050.jpg
Published on

ಬೆಳಗಾವಿ : ಮಾಹಿತಿ ಹಕ್ಕು ಕಾಯ್ದೆಯು ಅತ್ಯಂತ ಸರಳವಾಗಿದೆ. ಕಚೇರಿಯಲ್ಲಿ ಲಭ್ಯವಿರುವ ಮಾಹಿತಿಯನ್ನು ತ್ವರಿತವಾಗಿ ಹಾಗೂ ಪ್ರಾಮಾಣಿಕವಾಗಿ ಕಾಲಮಿತಿಯಲ್ಲಿ ಒದಗಿಸಬೇಕು. ದೇಶದಲ್ಲಿ ಪ್ರತಿವರ್ಷ ಅಂದಾಜು 50 ಲಕ್ಷ ಹಾಗೂ ಕರ್ನಾಟಕ ರಾಜ್ಯದಲ್ಲಿ ಐದು ಲಕ್ಷ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದು, ಅದರಲ್ಲಿ ಶೇ.3 ರಷ್ಟು ಮೇಲ್ಮನವಿ ಸಲ್ಲಿಕೆಯಾಗುತ್ತಿವೆ ಎಂದು ನಿವೃತ್ತ ಮಾಹಿತಿ ಆಯುಕ್ತ ಡಾ.ಶೇಖರ ಸಜ್ಜನ ಹೇಳಿದರು.

ಮಾಹಿತಿ ಹಕ್ಕು ಅಧಿನಿಯಮ 2005 ರ ನಿಯಮಗಳು ಮತ್ತು ಅಧಿನಿಯಮಗಳ ಕುರಿತು ಅಧಿಕಾರಿಗಳು ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗಾಗಿ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮಾಹಿತಿ ಹಕ್ಕು ಅಧಿನಿಯಮದ ಕುರಿತು ಪ್ರತಿಯೊಬ್ಬ ಅಧಿಕಾರಿ ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಕಡ್ಡಾಯವಾಗಿ ಅರಿತುಕೊಳ್ಳುವುದು ಅತ್ಯಗತ್ಯವಾಗಿದೆ ಎಂದರು.

ಸರ್ಕಾರಿ ಕಚೇರಿಗಳಲ್ಲಿ ಶೇ. 40 ರಷ್ಟು ಸಿಬ್ಬಂದಿ ಕೊರತೆ ಇರುವುದರಿಂದ ಮಾಹಿತಿ ಹಕ್ಕುಗಳ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದ ಅವರು, ಮಾಹಿತಿ ಲಭ್ಯವಿಲ್ಲದಿದ್ದರೆ ನಿಗದಿತ ಅವಧಿಯಲ್ಲಿ ಅರ್ಜಿದಾರರಿಗೆ ತಿಳಿಸಬೇಕು. ಭೌತಿಕವಾಗಿ ಅಥವಾ ಎಲೆಕ್ಟ್ರಾನಿಕ್ ರೂಪದಲ್ಲಿ ಲಭ್ಯವಿರುವ ಮಾಹಿತಿಯನ್ನು ಅದು ಇರುವಂತಹ ಮಾದರಿಯಲ್ಲಿ ಮಾತ್ರ ನೀಡಬಹುದಾಗಿದೆ. ಮೂರನೇ ವ್ಯಕ್ತಿಗೆ ಸಂಬಂಧಿಸಿದ ಮಾಹಿತಿ ನೀಡವಂತಿಲ್ಲ; ಯಾವುದೇ ರೀತಿಯ ಅಭಿಪ್ರಾಯ ಗಳನ್ನು ನೀಡುವಂತಿಲ್ಲ. ಸಾರ್ವಜನಿಕ ಹಿತಾಸಕ್ತಿ ಇಲ್ಲದಿರುವ ಅರ್ಜಿಗಳನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗಳು  ತಿರಸ್ಕರಿಸಬಹುದಾಗಿದೆ. ಅರ್ಜಿಗಳನ್ನು ತಿರಸ್ಕರಿಸಿದಾಗ ಐಪಿಓ ಹಿಂದಿರುಗಿಸುವಂತಿಲ್ಲ ಎಂದರು.
ನಿಯಮಾವಳಿ ಅನುಸಾರ ಎ.ಬಿ.ಸಿ.ಡಿ.ಇ. ಕೆಟಗರಿ ಪ್ರಕಾರ ಸರಕಾರಿ ದಾಖಲೆಗಳನ್ನು ಸಂರಕ್ಷಿಸಿಡಬೇಕು. ಕಚೇರಿಯಲ್ಲಿ ಲಭ್ಯವಿರುವ ಮಾಹಿತಿಯನ್ನು ತಮ್ಮ ಇಲಾಖೆಯ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಬೇಕು. ಒಂದು ಅರ್ಜಿಯಲ್ಲಿ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು 150 ಶಬ್ದಗಳಲ್ಲಿ ಮಾತ್ರ ಕೇಳಬಹುದು. ಕಲಂ 2ಜೆ ಪ್ರಕಾರ ಕಚೇರಿಯ ದಾಖಲೆಗಳ ಪರಿವೀಕ್ಷಣೆಗೆ ಅವಕಾಶವಿದ್ದು, ಪ್ರತಿ ಅರ್ಧ ಗಂಟೆಗೆ 10 ರೂಪಾಯಿಗಳಂತೆ ಶುಲ್ಕ ಆಕರಿಸಬಹುದು. ಅರ್ಜಿದಾರನು  ಶುಲ್ಕವನ್ನು 90 ದಿನಗಳ ಒಳಗಾಗಿ ಭರಿಸಬೇಕು. ಹಣ ತುಂಬಿದ 21 ದಿನಗಳ ಒಳಗಾಗಿ ನಿಗದಿತ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಮಾಹಿತಿ ನೀಡುವುದು ವಿಳಂಬವಾದರೆ ದಂಡ ತೆರಬೇಕಾಗುತ್ತದೆ ಎಂದು ನಿವೃತ್ತ ಮಾಹಿತಿ ಆಯುಕ್ತರಾದ ಡಾ.ಡಾ.ಶೇಖರ ಸಜ್ಜನವರ ಹೇಳಿದರು.

ಕಾರ್ಯಾಗಾರದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net