

ಮಂಡ್ಯ: ಪ್ರೇರಕ ಬ್ಯಾಂಕ್‌ಗಳ ಆಡಳಿತದಿಂದ ಮುಕ್ತಿ ಪಡೆದು ರಾಷ್ಟ್ರೀಯ ಗ್ರಾಮೀಣ ಬ್ಯಾಂಕ್ ಸ್ಥಾಪಿಸಿ ಅದರಡಿ ರಾಜ್ಯಮಟ್ಟದ ಗ್ರಾಮೀಣ ಬ್ಯಾಂಕನ್ನು ರಚಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹಾಗೂ ಗ್ರಾಮೀಣ ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.
ನಗರದ ಅಶೋಕನಗರದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿ ಎದುರು ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಸಂಘ, ಅಧಿಕಾರಿಗಳ ಸಂಘ, ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಪ್ರತಿಭಟಿಸಿದ ನೌಕರರು, ಅಖಿಲ ಭಾರತ ಗ್ರಾಮೀಣ ಬ್ಯಾಂಕ್ ನೌಕರರ ಸಂಘದ ಜನರಲ್ ಕೌನ್ಸಿಲ್ ಸಭೆಯಲ್ಲಿ ಗ್ರಾಮೀಣ ಬ್ಯಾಂಕ್‌ಗಳ ಪ್ರಸ್ತುತ ಪರಿಸ್ಥಿತಿ ಹಾಗೂ ಗ್ರಾಮೀಣ ಬ್ಯಾಂಕ್ ಉದ್ಯೋಗಿಗಳ ಸಮಸ್ಯೆಗಳನ್ನು ಸವಿಸ್ತಾರವಾಗಿ ಚರ್ಚಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದ್ದರಿಂದ ಒಂದು ಬಾರಿ ವಿಶೇಷ ನೇರ ನೇಮಕಾತಿ ಪ್ರಕ್ರಿಯೆ ನಡೆಸುವುದರ ಮೂಲಕ ಖಾಲಿ ಇರುವ 30 ಸಾವಿರ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಬೇಕು. ಗ್ರಾಮೀಣ ಬ್ಯಾಂಕುಗಳನ್ನು ಖಾಸಗೀಕರಣ ಮಾಡಬಾರದು. ಬಡ್ತಿ ನಿಯಮಾವಳಿಗಳನ್ನು ಶೀಘ್ರವೇ ಪುನರ್ ವಿಮರ್ಶಿಸಬೇಕು. ಪ್ರೇರಕ ಬ್ಯಾಂಕ್‌ಗಳಲ್ಲಿನ ಸಿಬ್ಬಂದಿ ಸೇವಾ ನಿಯಮಗಳು, ಬಡ್ತಿ ಪ್ರಕ್ರಿಯೆ ನಿಯಮಗಳು, ಪಿಂಚಣಿ ನಿಯಮಗಳು, ಅನುಕಂಪ ಆಧಾರಿತ ನೇಮಕಾತಿ ನಿಯಮಗಳು, ಕಂಪ್ಯೂಟರ್ ಇಂಕ್ರಿಮೆಂಟ್ ನಿಯಮಗಳ ಜತೆಗೆ ಪ್ರೇರಕ ಬ್ಯಾಂಕ್‌ಗಳಲ್ಲಿರುವ ವೇತನ ಶ್ರೇಣಿ ಮತ್ತು ಇತರೆ ಸೌಲಭ್ಯಗಳು ಗ್ರಾಮೀಣ ಬ್ಯಾಂಕ್ ಉದ್ಯೋಗಿಗಳಿಗೂ ಯಥಾವತ್ತಾಗಿ ವಿಸ್ತರಿಸಬೇಕು. ಗ್ರಾಮೀಣ ಬ್ಯಾಂಕುಗಳಲ್ಲಿರುವ ಎಲ್ಲ ದಿನಗೂಲಿ / ಹೊರಗುತ್ತಿಗೆ ನೌಕರರನ್ನು ಒಂದು ಬಾರಿ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಖಾಯಂಗೊಳಿಸಬೇಕು. ಎಲ್ಲ ತರಹದ ವಿಮಾ ಸರಕುಗಳ ಮಾರಾಟವನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಆರ್.ವಸಂತ್‌ಕುಮಾರ್, ಜಂಟಿ ಕಾರ್ಯದರ್ಶಿ ಎಚ್.ಸಿ.ನಾಗರಾಜು, ಉಮಾಶಂಕರ್, ಪುಟ್ಟಸ್ವಾಮಿ, ಸತ್ಯಾನಂದಸ್ವಾಮಿ, ದಿನೇಶ್, ಸತ್ಯ, ಮಹದೇವಸ್ವಾಮಿ, ಬಿಂದಿಯಾ, ಮದನಿಕ, ಸುನಿತಾ ಮಣಿ, ಉಮಾದೇವಿ ಇತರರಿದ್ದರು.