ಪರಿಷ್ಕೃತ ವೇತನ ಜಾರಿಗೊಳಿಸಿ: ಮಂಡ್ಯದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಪ್ರತಿಭಟನೆ

Protest
Published on

ಮಂಡ್ಯ: ಪರಿಷ್ಕೃತ ವೇತನವನ್ನು ಯಥಾವತ್ತಾಗಿ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಶುಕ್ರವಾರ ನಗರದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳು ಮತ್ತು ನೌಕರರು ಬ್ಯಾಂಕ್‌ನ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ಗ್ರಾಮೀಣ ಬ್ಯಾಂಕ್ ಎದುರು ಜಮಾವಣೆಗೊಂಡ ನೌಕರರು, ಖಾಸಗಿ ಬಂಡವಾಳ ಆಕರ್ಷಿಸುವ ಸಲುವಾಗಿ ಷೇರು ಬಂಡವಾಳ ಹಿಂತೆಗೆಯುವ ಐಪಿಒ ಪದ್ಧತಿ ಸರಿಯಲ್ಲ. ಅಂತೆಯೇ ಬ್ಯಾಂಕುಗಳ ಖಾಸಗೀಕರಣ ಮಾಡಬಾರದು. ವೇತನ ಪರಿಷ್ಕರಣೆಯನ್ನು ಯಥಾವತ್ತಾಗಿ ಜಾರಿ ಮಾಡಬೇಕು. ನಿವೃತ್ತಿ ವೇತನದಲ್ಲಿ ಆಗಿರುವ ನ್ಯೂನತೆಗಳನ್ನು ಸರಿಪಡಿಸಬೇಕು. ಅಂತೆಯೇ ರಾಷ್ಟ್ರೀಯ ಗ್ರಾಮೀಣ ಬ್ಯಾಂಕ್ ಸ್ಥಾಪಿಸಿ ಗುತ್ತಿಗೆ ನೌಕರರ ಹುದ್ದೆಯನ್ನು ಖಾಯಂಗೊಳಿಸಬೇಕು. ಈ ಹಿನ್ನೆಲೆಯಲಿ ಕೇಂದ್ರ ಸಂಘಟನೆಯ ಕರೆಯ ಮೇರೆಗೆ ಸರ್ಕಾರದ ಗಮನಸೆಳೆಯಲು ಪ್ರತಿಭಟನೆ ಅನಿವಾರ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕೆಜಿಬಿಒಎ ಸಹ ಕಾರ್ಯದರ್ಶಿ ಎಚ್.ಸಿ.ನಾಗರಾಜು, ಜಿಲ್ಲಾಧ್ಯಕ್ಷ ಶ್ರೀಧರ್, ಕಾರ್ಯದರ್ಶಿ ರಕ್ಷಿತ್ ಕುಮಾರ್, ಕೆಜಿಬಿಇಯು ಜಿಲ್ಲಾಧ್ಯಕ್ಷ ಡಿ.ಶಿವಲಿಂಗೇಗೌಡ, ಕಾರ್ಯದರ್ಶಿ ಜಿ.ಸಿ.ನಾಗೇಶ್, ಮಹದೇವಸ್ವಾಮಿ, ನಿವೃತ್ತ ನೌಕರರರ ಕ್ಷೇಮಾಭಿವೃದ್ಧಿ ಸಂಘದ ಸತ್ಯಾನಂದಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net