

ಬೆಂಗಳೂರು: ಸರ್ಕಾರಿ ನೌಕರರ ಬೇಡಿಕೆಗಳ ಪರಿಶೀಲನೆ ಮಾಡಿ ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಮತ್ತು ಪದಾಧಿಕಾರಿ ಗಳೊಂದಿಗೆ ಆಯವ್ಯಯದ ಪೂರ್ವಭಾವಿ ಚರ್ಚೆ ನಡೆಸಿದರು. ಈ ಬಜೆಟ್ನಲ್ಲಿಯೇ ಬೇಡಿಕೆ ಈಡೇರಿಕೆಗೆ ಘೋಷಣೆ ಮಾಡುವಂತೆ ನೌಕರರ ಸಂಘ ಒತ್ತಾಯಿಸಿದೆ.
ಸರ್ಕಾರಿ ನೌಕರರಿಗೆ ತೀವ್ರ ತರಹದ ಶಸ್ತ್ರಚಿಕಿತ್ಸೆ, ಕಾಂಪ್ಲೆಕ್ಸ್ ಸೆಕೆಂಡರಿ ಶಸ್ತ್ರಚಿಕಿತ್ಸೆ ಸೇರಿ ಎಲ್ಲ ರೀತಿಯ ಸರ್ಜರಿ ವಿಧಾನಗಳಿಗೆ ನಗದುರಹಿತ ಚಿಕಿತ್ಸೆ ಮಾಡಬೇಕು. ತೃತೀಯ ಹಂತದ ಕಾಯಿಲೆಗಳಿಗೆ ಈಗಿರುವ ಸಿಜಿಎಚ್ಎಸ್ ದರಗಳನ್ನು ಪರಿಷ್ಕರಿಸಿ ಸರಳೀಕರಿಸಿ ವೈದ್ಯಕೀಯ ವೆಚ್ಚ ಮರುಪಾವತಿ ಮಾಡುವ ವ್ಯವಸ್ಥೆ ಆಗಬೇಕು. ಪ್ರತಿಷ್ಠಿತ ಆಡಳಿತ ತರಬೇತಿ ಸಂಸ್ಥೆ ಮಾದರಿಯಲ್ಲಿ ಸರ್ಕಾರಿ ನೌಕರರಿಗೆ ತರಬೇತಿಗಾಗಿ ಉನ್ನತ
ಮಟ್ಟದ ತರಬೇತಿ ಸಂಸ್ಥೆಗಳ ಸ್ಥಾಪನೆ ಮಾಡಬೇಕು. 6ನೇ ವೇತನ ಆಯೋಗದ ಅಂತಿಮ ವರದಿ ಅನುಷ್ಠಾನ, ಗೃಹ ನಿರ್ಮಾಣ ಇತರೆ ಮುಂಗಡ ಹೆಚ್ಚಳ ಹಾಗೂ ಸರಳೀಕರಣ, ಹೆಚ್ಚುವರಿ ಸರ್ಕಾರಿ ವಸತಿ ಗೃಹ ನಿರ್ವಣ, ತಿಂಗಳ ಮೊದಲ ವಾರದಲ್ಲಿ ವೇತನ ಭತ್ಯೆ ನೀಡಿಕೆ, ಪೊಲೀಸ್ ಇಲಾಖೆಯ ಔರಾದ್ಕರ್ ವರದಿ ಅನುಷ್ಠಾನ, ಹೈದರಾಬಾದ್ ಕರ್ನಾಟಕ 371 ಜೆ ಕಚೇರಿಯನ್ನು ಬೆಂಗಳೂರಿನಿಂದ ಕಲಬುರಗಿಗೆ ಸ್ಥಳಾಂತರ ಮಾಡಿಕೊಡುವಂತೆ ಮುಖ್ಯಮಂತ್ರಿಗಳನ್ನು ನೌಕರರ ಸಂಘ ಒತ್ತಾಯಿಸಿತು.