ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ನೌಕರರ ಮನವಿ

VMS 4-6
Published on

ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾ ಶಾಖೆ ಪದಾಧಿಕಾರಿಗಳು ಕೈಗೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸುವ ಮೂಲಕ ಗುರುವಾರ ಜಿಲ್ಲಾಧಿಕಾರಿಗಳ ಆಪ್ತಸಹಾಯಕ ಪವನ ನಿಂಬಾಳಕರ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ 2020ರ ಜನವರಿಯಿಂದ 2021ರ ಜೂನ್‌ವರೆಗೆ ತುಟ್ಟಿಭತ್ಯೆ ಹೆಚ್ಚಳ ದರವನ್ನು ಸ್ಥಗಿತಗೊಳಿಸಿರುವ ಆದೇಶ ಹಿಂಪಡೆಯಬೇಕು. ಗಳಿಕೆ ರಜೆ ನಗದೀಕರಣ ರದ್ಧ್ದತಿ ಆದೇಶ ಹಿಪಡೆಯುವುದು, ನೌಕರ-ವಿರೋಧಿ ಅಂಶಗಳಿರುವ ಸಿಸಿಎ ತಿದ್ದುಪಡಿ ಪ್ರಸ್ತಾವನೆ ಕೈಬಿಡುವುದು, ಇಲಾಖಾ ಹುದ್ದೆಗಳ ರದ್ದು ಪ್ರಸ್ತಾವನೆ ಕೈಬಿಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಒಕ್ಕೂಟದ ರಾಜ್ಯ ಕಾರ್ಯದರ್ಶಿ ಸುರೇಶ ಜೀಬಿ ಮಾತನಾಡಿ, ಹೊರಗುತ್ತಿಗೆ / ದಿನಗೂಲಿ/ ಗುತ್ತಿಗೆ ನೌಕರರಿಗೆ ನೇಮಕಾತಿಯಲ್ಲಿ ವಿಶೇಷ ಪ್ರಾತಿನಿಧ್ಯ ನೀಡಿ ನೇಮಕಾತಿ ಮಾಡಿಕೊಳ್ಳಬೇಕು. ಹೊರಗುತ್ತಿಗೆ/ದಿನಗೂಲಿ/ಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಕಾರ್ಮಿಕ ಕಾನೂನುಗಳಿಗೆ ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ಕೈಬಿಡಬೇಕು. ಕರೊನಾ ತಡೆಗಟ್ಟುವಿಕೆಯಲ್ಲಿ ನಿರತರಾಗಿರುವ ನೌಕರರಿಗೆ ಅವಶ್ಯ ವೈಯಕ್ತಿಕ ಸಂರಕ್ಷಣಾ ಉಪಕರಣಗಳನ್ನು ಮತ್ತು ವಿಶೇಷ ಪ್ರೋತ್ಸಾಹಧನ ನೀಡಬೇಕೆಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಚಂದ್ರಶೇಖರ ಲೆಂಡಿ, ಎಸ್.ಜಿ. ಸಂಗಾಪುರ, ಅಶೋಕ ಇರಕಲ್, ಜಿ.ಬಿ.ಅಂಗಡಿ, ಸಂತೋಷ ಯರಗಲ್, ಆರ್.ಎಸ್. ಬಣಸಗಿ, ಸಂಗ್ರಾಮ ಪಾಟೀಲ, ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net