

ಮಡಿಕೇರಿ: ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಕನ್ನಡ ಸ್ನೇಹಸಿರಿ ಬಳಗ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕದ ಏಕೀಕರಣ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಮಹಿಳೆಯರ ಪಾತ್ರ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾಲೇಜಿನ ಪ್ರಾಂಶುಪಾಲೆ ಡಾ.ಕೋರನ ಸರಸ್ವತಿರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಕೊಡಗು ಜಿಲ್ಲೆಯ ನಿಕಟಪೂರ್ವ ಅಧ್ಯಕ್ಷರು ಹಾಗೂ ಕನ್ನಡ ಸ್ನೇಹಸಿರಿ ಬಳಗದ ಅಧ್ಯಕ್ಷ ಲೋಕೇಶ್ ಸಾಗರ್, ಇತಿಹಾಸದಲ್ಲಿ ಮಹಿಳೆಯರ ಸಾಧನೆಗಳನ್ನು ದಾಖಲಿಸುವಲ್ಲಿ ತಾತ್ಸಾರ ತೋರಿದ ಪರಿಣಾಮ ಇಂದು ಸಾಧಕಿಯರ ಬಗ್ಗೆ ಮಾಹಿತಿ ದೊರೆಯುತ್ತಿಲ್ಲ. ಅಂತಹ ಮಹಿಳೆಯರನ್ನು ಸದಾ ಸ್ಮರಿಸುವ ನಿಟ್ಟಿನಲ್ಲಿ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಕರ್ನಾಟಕ ನಾಮಕರಣದ ಸುವರ್ಣ ಸಂಭ್ರಮದಲ್ಲಿ ಜಿಲ್ಲೆಯಾದ್ಯಂತ ಕನ್ನಡ ಸ್ನೇಹಸಿರಿ ಬಳಗ ಐವತ್ತು ಕಾರ್ಯಕ್ರಮ ನಡೆಸುವ ಉದ್ದೇಶ ಹೊಂದಿದ್ದು ಇಂದು ಮೂವತ್ತೊಂಬತ್ತನೇ ಕಾರ್ಯಕ್ರಮ ನಡೆಸುತ್ತಿದ್ದು ಸಹಕರಿಸಿದ ಎಲ್ಲಾ ಕನ್ನಡಿಗರಿಗೆ ಅಬಾರಿಯಾಗಿದ್ದೇವೆ. ಕೊಡಗಿನ ಕವಯಿತ್ರಿ ಬರಹಗಾರ್ತಿ ಕೊಡಗಿನ ಗೌರಮ್ಮ ನವರು ಮಹಾತ್ಮ ಗಾಂಧಿಯವರಿಗೆ ತನ್ನೆಲ್ಲಾ ಒಡವೆಗಳನ್ನು ಸ್ವಾತಂತ್ರ್ಯ ಹೋರಾಟಕ್ಕೆ ನೀಡಿ ಸಹಕರಿಸಿದ್ದನ್ನು ಸ್ಮರಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಸಂಪನ್ಮೂಲ ವ್ಯಕ್ತಿಯಾಗಿ ವಿಚಾರ ಮಂಡನೆ ಮಾಡಿ ಮಾತನಾಡಿದ ವಿರಾಜಪೇಟೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಸಿ.ದಯಾನಂದ ಮಾತನಾಡಿ, ಅಂದಿನ ಕಾಲದಲ್ಲಿ ಕರ್ನಾಟಕದ ನೂರಾರು ಮಹಿಳೆಯರು ತಮ್ಮ ವೈಯುಕ್ತಿಕ ಬದುಕನ್ನು ಬದಿಗಿಟ್ಟು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿದ್ದನ್ನು ವಿವರಿಸಿದರು.
ಪತ್ರಕರ್ತ ಕುಡೇಕಲ್ ಸಂತೋಷ್. ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿಯ ಸಂಚಾಲಕ ತೆನ್ನಿರ ಮೈನಾ, ಕಾಲೇಜಿನ ಪ್ರಾಚಾರ್ಯ ಪ್ರೊಫೆಸರ್ ಸತೀಶ್ ರವರು ಕಾರ್ಯಕ್ರಮದ ಕುರಿತು ಮಾತನಾಡಿದರು.
ಇದೇ ಸಂಧರ್ಭದಲ್ಲಿ ಗೌರಮ್ಮ ದತ್ತಿ ನಿಧಿ ಪುರಸ್ಕಾರಕ್ಕೆ ಭಾಜನರಾದ ಡಾ.ಕೋರನ ಸರಸ್ವತಿ ಹಾಗೂ ಪುನೀತ್ ರಾಜ್ ಕುಮಾರ್ ಪ್ರಶಸ್ತಿಯನ್ನು ಪಡೆದ ಲೋಕೇಶ್ ಸಾಗರ್ ರವರನ್ನು ಅಭಿನಂದಿಸಲಾಯಿತು. ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ನಿರ್ಮಲರವರು ಕಾರ್ಯಕ್ರಮ ನಿರೂಪಿಸಿದರೆ, ವಿಧ್ಯಾರ್ಥಿನಿ ಪ್ರೀಯ ಸ್ವಾಗತಿಸಿ, ವಿದ್ಯಾರ್ಥಿನಿ ವಿದ್ಯಾಶ್ರೀ ವಂದಿಸಿದರು.