

ಪ್ರಕಾಶ್ ಮಂಜೇಶ್ವರ ಮಂಗಳೂರು
ಕಳೆದ ಆರು ದಿನಗಳಿಂದ ಚಿಕಿತ್ಸೆಗಾಗಿ ಇಎಸ್‌ಐ ಆಸ್ಪತ್ರೆ ಹಾಗೂ ಇದರ ಸಂಯೋಜಿತ ಖಾಸಗಿ ಸುಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ತೆರಳಿದ ರಾಜ್ಯದ ಕಾರ್ಮಿಕರು ನಿರಾಶೆಯಿಂದ ವಾಪಸಾಗುತ್ತಿದ್ದಾರೆ.
ಕಾರ್ಮಿಕರ ಚಿಕಿತ್ಸೆಗಾಗಿ ರಾಜ್ಯ ಸರ್ಕಾರವು ಖಾಸಗಿ ಸುಪರ್ ಸ್ಪೆಷಾಲಿಟಿ ಆಸ್ಪತ್ರೆಗಳೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯ ಅವಧಿ ಕಳೆದ ನವೆಂಬರ್ 30 ರಂದು ಮುಕ್ತಾಯಗೊಂಡಿದ್ದು, ನವೀಕರಣಕ್ಕೆ ಇನ್ನೂ ರಾಜ್ಯ ಸರ್ಕಾರ ಅಂಕಿತ ಹಾಕದೆ ಇರುವುದು ಸಮಸ್ಯೆಯಾಗಿದೆ.
ಸಾಮಾನ್ಯ ಖಾಸಗಿ ಕಂಪನಿ ನೌಕರರು ಹಾಗೂ ಅವರ ಕುಟುಂಬ ಸದಸ್ಯರು ಅನಾರೋಗ್ಯಕ್ಕೆ ಒಳಗಾದ ಸಂದರ್ಭ ಅವರನ್ನು ಕಾಪಾಡುವ ಏಕೈಕ ವ್ಯವಸ್ಥೆ ಇಎಸ್‌ಐ ಆಸ್ಪತ್ರೆ. ಇದಕ್ಕಾಗಿ ಕಂಪನಿ ನೌಕರರ ಮಾಸಿಕ ವೇತನದಿಂದ ನಿರ್ದಿಷ್ಟ ಮೊತ್ತವನ್ನು ಮುರಿದುಕೊಳ್ಳಲಾಗುತ್ತಿದೆ. ಕಂಪನಿ ಮಾಲೀಕರು ಕೂಡ ನಿರ್ದಿಷ್ಟ ಪಾಲು ಒದಗಿಸುತ್ತಾರೆ. ಆದರೆ ಇಂದು ಕಾರ್ಮಿಕರಿಗೆ ಆಸರೆಯಾಗಿದ್ದ ಈ ವ್ಯವಸ್ಥೆಯೇ ಕೈತಪ್ಪಿದಂತಾಗಿದೆ.
ಕೇಂದ್ರ ಸರ್ಕಾರದ ವತಿಯಿಂದ ಹಣ ಬಿಡುಗಡೆಯಾಗುವ ಕಿಡ್ನಿ, ಕ್ಯಾನ್ಸರ್, ಮೆದುಳು ಗಡ್ಡೆ ಮುಂತಾದ ತೀವ್ರ ಗಂಭೀರ ಸ್ವರೂಪದ ಚಿಕಿತ್ಸೆಗಳಿಗೆ ಸಮಸ್ಯೆಯಾಗಿಲ್ಲ. ಆದರೆ ಈ ಅವಕಾಶ ಸೆಪ್ಟೆಂಬರ್ ತಿಂಗಳಾಂತ್ಯದವರೆಗೆ ಇದ್ದರೂ ಬಳಿಕ ಸರ್ಕಾರವೇ ಡಿಸೆಂಬರ್ ಅಂತ್ಯದವರೆಗೆ ವಿಸ್ತರಿಸಿದೆ.
ಇಎಸ್‌ಐ ಫಲಾನುಭವಿಗಳು ಹೆಚ್ಚಿನವರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರು. ಪ್ರಸ್ತಾವಿತ ವಿಷಯದಿಂದ ಕಾರ್ಮಿಕರು ತುಂಬಾ ಸಮಸ್ಯೆ ಎದುರಿಸುತ್ತಿದ್ದಾರೆ. ಆಸ್ಪತ್ರೆಗಳಿಗೆ ಭೇಟಿ ನೀಡಿ, ದೂರವಾಣಿ ಮೂಲಕ ಕಷ್ಟ ಹೇಳಿಕೊಳ್ಳುವವರನ್ನು ಸಮಾಧಾನ ಮಾಡುವುದೇ ಕಷ್ಟವಾಗಿದೆ. ಸಮಸ್ಯೆಗೆ ಶೀಘ್ರ ಪರಿಹಾರ ಅಗತ್ಯವಾಗಿದೆ ಎಂದು ಇಎಸ್‌ಐ ಆಸ್ಪತ್ರೆಯ ವೈದ್ಯಾಧಿಕಾರಿಯೋರ್ವರು ಪ್ರತಿಕ್ರಿಯಿಸಿದ್ದಾರೆ.
ಇಂದು ಇಎಸ್‌ಐ ಆಸ್ಪತ್ರೆಗಳು ಕೇವಲ ಬೇರೊಂದು ಆಸ್ಪತ್ರೆಗಳಿಗೆ ರೋಗಿಗಳನ್ನು ಕಳುಹಿಸುವ ಕೇಂದ್ರಗಳಾಗಿ ಮಾರ್ಪಟ್ಟಿವೆ. ಪ್ರಮುಖ ತಜ್ಞರು, ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು, ಅಗತ್ಯ ಪ್ರಮಾಣದ ವೈದ್ಯರು ಯಾವುದೇ ಇಎಸ್‌ಐ ಆಸ್ಪತ್ರೆಯಲ್ಲಿ ಇಲ್ಲ. ಆದ್ದರಿಂದ ಇಲ್ಲಿಯ ತನಕ ಅರ್ಹ ಶೇ.99 ಕಾರ್ಮಿಕರು ಕೂಡ ಖಾಸಗಿ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಪರಿಣಾಮ ಇಂದು ಇಎಸ್‌ಐ ಆಸ್ಪತ್ರೆಯನ್ನು ನಂಬಿಕೊಂಡಿರುವ ಸಾಮಾನ್ಯ ದುಡಿಯುವ ವರ್ಗದ ಜನರು ಕಂಗಾಲಾಗಿದ್ದಾರೆ.
ಇಂದು ಇಎಸ್‌ಐ ಆಸ್ಪತ್ರೆಗಳು ಕೇವಲ ಬೇರೊಂದು ಆಸ್ಪತ್ರೆಗಳಿಗೆ ರೋಗಿಗಳನ್ನು ಕಳುಹಿಸುವ ಕೇಂದ್ರಗಳಾಗಿ ಮಾರ್ಪಟ್ಟಿವೆ. ಪರಿಣಾಮ ರಾಜ್ಯದಲ್ಲಿ ಇದಕ್ಕಾಗಿ 49 ರಿಂದ 50 ಕೋಟಿ ರೂ. ವ್ಯಯಿಸಲಾಗುತ್ತಿದೆ. ಇಎಸ್‌ಐನಿಂದಲೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಆರಂಭಿಸಿದರೆ ಇಷ್ಟು ದೊಡ್ಡ ಪ್ರಮಾಣದ ಹಣ ಖಾಸಗಿ ಆಸ್ಪತ್ರೆಗಳ ಪಾಲಾಗುವುದನ್ನು ತಪ್ಪಿಸಬಹುದು ಎನ್ನುವ ಬೇಡಿಕೆ ತುಂಬಾ ಹಳೆಯದು. ಖಾಸಗಿ ಆಸ್ಪತ್ರೆಗಳನ್ನೇ ಸರ್ಕಾರ ಪೂರ್ಣ ನಂಬಿ ಕುಳಿತ ಕಾರಣ ಜನತೆ ಸಮಸ್ಯೆ ಎದುರಿಸುವಂತಾಗಿದೆ.
------
ಇಎಸ್‌ಐ ಅರ್ಹ ಫಲಾನುಭವಿಗಳಿಗೆ ಸಂಯೋಜಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಒದಗಿಸುವ ಒಡಂಬಡಿಕೆಗೆ ಇಲಾಖೆ ಕಾರ್ಯದರ್ಶಿ ಸಹಿ ಹಾಕದೆ ಇರುವುದರಿಂದ ಸಮಸ್ಯೆಯಾಗಿದೆ ಎನ್ನುವ ವಿಷಯ ಗಮನಕ್ಕೆ ಬಂದಿದೆ. ಯಾವ ಕಾರಣಕ್ಕೆ ಫೈಲ್ ಬಾಕಿ ಆಗಿದೆ ಎನ್ನುವುದನ್ನು ಪರಿಶೀಲಿಸಿ ಮುಂದಿನ ಕ್ರಮಕ್ಕೆ ಆದ್ಯತೆಯಲ್ಲಿ ಸೂಚನೆ ನೀಡಲಾಗುವುದು.
* ಯು.ಟಿ.ಖಾದರ್
ವಿಧಾನಸಭೆ ಅಧ್ಯಕ್ಷರು.