

ಆಲೂರು: ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಅಚರಿಸುವುದು ಮತ್ತು ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತ, ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ ಹೇಳಿದರು.
ತಾಲೂಕಿನ ಹರಿಹಳ್ಳಿಯ ಮಂಗಳ ಕಲಾ ಸಾಹಿತ್ಯ ವೇದಿಕೆ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರೋಪ ಸಮಾರಂಭ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ರಜತೋತ್ಸವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷೆಗೆ ಎರಡೂವರೆ ಸಾವಿರ ವರ್ಷಗಳ ಇತಿಹಾಸವಿದೆ. ನಮ್ಮ ಕನ್ನಡ ನಾಡನ್ನು ಶ್ರೀಗಂಧದ ನಾಡು, ಕರುನಾಡು, ಕನ್ನಡಾಂಭೆಯ ನಾಡು, ತಾಯಿ ಭುವನೇಶ್ವರಿಯ ನಾಡು ಎಂಬೆಲ್ಲ ಹೆಸರುಗಳಿಂದ ಕರೆಯುತ್ತೇವೆ. ಹಚ್ಚಹಸಿರಿನ ಸುಂದರ ಬೆಟ್ಟ ಗುಡ್ಡಗಳು, ನದಿಗಳು ಇರುವ, ಸಾಧು-ಸಂತರು, ದಾಸರು- ಶಿವಶರಣರು, ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡಿಗೆ ವಿಶೇಷ ಶಕ್ತಿ ಇದೆ. ಈ ಸುಂದರ, ಸಮೃದ್ಧ ನಾಡಿನಲ್ಲಿ ಜನಿಸಿರುವುದು ನಮ್ಮೆಲ್ಲರ ಅದೃಷ್ಟ ಎಂದರು.
ಸಾಹಿತಿ ಕೆ.ವಿ.ಲಕ್ಷ್ಮಣಮೂರ್ತಿ ಮಾತನಾಡಿದರು. ಮುಖ್ಯಶಿಕ್ಷಕಿ ಪ್ರಮೀಳಾ, ಹರಿಹಳ್ಳಿ ಎಚ್.ಡಿ.ಗೋಪಾಲ್(ರಘು), ರಘು ಪಾಳ್ಯ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಸೈನಿಕ ಉದಯ್ ಹೆನ್ನಲಿ, ಶಿಕ್ಷಣ ಇಲಾಖೆ ಬಿಆರ್‌ಪಿ ಪ್ರಮೀಳಾ, ಲಯನ್ಸ್ ಸೇವಾ ಸಂಸ್ಥೆಯ ಹೋಬಳಿ ಅಧ್ಯಕ್ಷ ಕೆ.ಎನ್.ಕುಮಾರ್, ಎಚ್.ಆರ್.ಕೃಷ್ಣಮೂರ್ತಿ, ವೇದಿಕೆಯ ಕಾರ್ಯಾದರ್ಶಿ ಎಚ್.ಎನ್.ಸತ್ಯನಾರಾಯಣ್, ವೇದಿಕೆಯ ಎಚ್ .ಡಿ.ಸೋಮೇಶ್, ಎಚ್.ಕೆ.ಅನಂತಪ್ರಸಾದ್, ಗ್ರಾಪಂ ಸದಸ್ಯ ಎಚ್.ಕೆ.ಚಂದ್ರಶೇಖರ್ ಇದ್ದರು.