

ಶೃಂಗೇರಿ: ರಾಜ್ಯಾದ್ಯಂತ ಮಕ್ಕಳ ಸೃಜನಶೀಲತೆ ಅನಾವರಣಗೊಳಿಸಲು ಸಂಗಾತಿ ರಂಗಭೂಮಿ ನಿರಂತರ ಕಾರ್ಯನಿರ್ವಹಿಸುತ್ತಿದೆ ಎಂದು ಅಂಕೋಲಾ ಸಂಗಾತಿ ರಂಗಭೂಮಿ ಕಾರ್ಯಾಧ್ಯಕ್ಷ ಕೆ.ರಮೇಶ್ ತಿಳಿಸಿದರು.
ಚಪ್ಪರದ ಆಂಜನೇಯ ಸ್ವಾಮಿ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಕನ್ನಡ ಜಾನಪದ ಪರಿಷತ್ತು ಹಾಗೂ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕರ್ನಾಟಕ ಡಾನ್ಸ್ ಚಾಂಪಿಯನ್ ಹೆಸರಿನಲ್ಲಿ ರಾಜ್ಯದ ಎಲ್ಲಡೆ ಮಕ್ಕಳಲ್ಲಿ ಸಾಂಸ್ಕೃತಿಕ ಜಾಗೃತಿ ಮೂಡಿಸಲು ಯಕ್ಷಗಾನ, ಬೀದಿನಾಟಕದ ಜತೆ ಪರಿಸರದ ಜಾಗೃತಿ ಮೂಡಿಸಲು ಹಸಿರು ಅಭಿಯಾನ ಕೂಡಾ ನಡೆಸಲಾಗಿದೆ. ನೃತ್ಯ ಕ್ಷೇತ್ರದಲ್ಲಿ ವಿಭಿನ್ನ ಕಾರ್ಯಕ್ರಮ ನಡೆಸಬೇಕು ಎಂಬ ಯೋಜನೆಯಂತೆ 800ಕ್ಕೂ ಹೆಚ್ಚು ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡಿದ್ದೇವೆ. ಶೃಂಗೇರಿಯಲ್ಲೂ ಐದನೇ ತರಗತಿಯಿಂದ ಹತ್ತನೇ ತರಗತಿ ಮಕ್ಕಳಿಗಾಗಿ ನವೆಂಬರ್ ಮೊದಲ ವಾರದಲ್ಲಿ ನೃತ್ಯ ಕಾರ್ಯಕ್ರಮ ಏರ್ಪಡಿಸಲಿದ್ದು ಪ್ರತಿ ಮಗುವನ್ನೂ ಗೌರವಿಸಲಾಗುವುದು ಎಂದರು.
ಮೆಣಸೆ ಗ್ರಾಪಂ ಸದಸ್ಯ ತ್ರಿಮೂರ್ತಿ, ತಾಲೂಕು ಕನ್ನಡ ಜಾನಪದ ಪರಿಷತ್ತು ಅಧ್ಯಕ್ಷ ಆಶಿಶ್ ದೇವಾಡಿಗ, ಸಂಗಾತಿ ರಂಗಭೂಮಿ ಸಂಯೋಜಕಿ ಜಿ.ಸೇವಂತಿ, ಪದಾಧಿಕಾರಿಗಳಾದ ಆನಂದ್, ವೆಂಕಟೇಶ್ ಇದ್ದರು.