

ಹರಿಹರ: ಮಾ.18 ರಿಂದ 22 ರವರೆಗೆ ನಡೆಯುವ ನಗರದ ಗ್ರಾಮದೇವತೆ ಮಹೋತ್ಸವದಲ್ಲಿ ನಡೆಸುವ ಮೌಢ್ಯಾಚರಣೆಗಳನ್ನು ಹಾಗೂ ಜೂಜಾಟವನ್ನು ತಡೆಯಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಶುಕ್ರವಾರ ತಹಸೀಲ್ದಾರ್ ಗುರುಬಸವರಾಜ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಕದಸಂಸ ತಾಲೂಕು ಘಟಕ ಅಧ್ಯಕ್ಷ ಎಂ. ಮಂಜುನಾಥ್ ಮಾತನಾಡಿ, ಪ್ರತಿ 3 ವರ್ಷಕ್ಕೊಮ್ಮೆ ಆಚರಿಸುವ ಉತ್ಸವದಲ್ಲಿ ಕೋಣ ಬಲಿ, ಅರೆ ಬೆತ್ತಲೆ ಬೇವಿನ ಉಡುಗೆ ಹಾಗೂ ಮನರಂಜನೆಯ ಹೆಸರಲ್ಲಿ ಜೂಜಾಡುವ ಸಮಾಜ ವಿರೋಧಿ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿದೆ ಎಂದರು.
ಈ ಹಿಂದೆ ಚಂದ್ರಗುತ್ತಿ ಉತ್ಸವದಲ್ಲಿ ದಲಿತ, ಹಿಂದುಳಿದ ವರ್ಗದ ಮಹಿಳೆಯರಿಂದ ನಡೆಯುತ್ತಿದ್ದ ಬೆತ್ತಲೆ ಸೇವೆಯನ್ನು ತಡೆಯಲು ಹರಿಹರದವರಾದ ಕದಸಂಸ ಸ್ಥಾಪಕ ದಿ.ಪೊ›.ಬಿ. ಕೃಷ್ಣಪ್ಪ ಅವರು ದೊಡ್ಡ ಆಂದೋಲನ ರೂಪಿಸಿ ಯಶಸ್ಸನ್ನು ಕಂಡರು. ಆದರೆ ಅವರ ಹುಟ್ಟೂರಲ್ಲಿ ಉತ್ಸವದ ಹೆಸರಲ್ಲಿ ಮೌಢ್ಯತೆ ನಡೆಯುತ್ತಿರುವುದನ್ನು ಸಹಿಸಲಾಗದು. ಹಾಗೆಯೇ ಪ್ರತಿ ಉತ್ಸವದ ಸಂದರ್ಭದಲ್ಲಿ ಪೊಲೀಸರು ಯಾವುದೋ ಒಂದು ಕೋಣ ಹಿಡಿದು ಕೋಣ ಬಲಿಯನ್ನು ಸಂಪೂರ್ಣವಾಗಿ ತಡೆಯಲಾಗಿದೆ ಎಂದು ಹೇಳುತ್ತಾರೆ. ಆದರೆ ವಾಸ್ತವವಾಗಿ ಹಲವು ಕೋಣಗಳ ಬಲಿ ರಾಜಾರೋಷವಾಗಿ ನಡೆಯುತ್ತಿದೆ ಎಂದು ಹೇಳಿದರು.
ಉತ್ಸವದ ಸಂದರ್ಭದಲ್ಲಿ ಮನರಂಜನೆಯ ಹೆಸರಲ್ಲಿ 20ಕ್ಕೂ ಹೆಚ್ಚು ಜೂಜು ಅಡ್ಡೆಗಳನ್ನು ತೆರೆಯಲಾಗುತ್ತಿದೆ. ಇದಕ್ಕಾಗಿ ಈಗಾಗಲೆ ಪ್ರಭಾವಿ ವ್ಯಕ್ತಿಗಳು ಸಂಬಂಧಿತ ಇಲಾಖೆ ಅಧಿಕಾರಿಗಳ ಮನವೊಲಿಸುವ ಕೆಲಸ ಮಾಡಿದ್ದಾರೆಂದು ತಿಳಿದು ಬಂದಿದೆ ಎಂದರು.
ಉತ್ಸವದ ಹೆಸರಲ್ಲಿ ನಡೆಯುವ ಮೌಢ್ಯಾಚರಣೆ ಹಾಗೂ ಜೂಜಾಟವನ್ನು ತಾಲೂಕು ಜಿಲ್ಲಾಡಳಿತ ಹಾಗೂ ಪೊಲೀಸರು ತಡೆಯಬೇಕು. ಹಿಂದಿನ ವರ್ಷದಂತೆ ಈ ಅನಿಷ್ಟ ಪದ್ಧತಿಗಳು ಈ ಬಾರಿಯೂ ಮುಂದುವರಿದರೆ ತಾಲೂಕು ಕಚೇರಿ ಎದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಸಂಘಟನೆ ಪದಾಧಿಕಾರಿಗಳಾದ ಶಿವಕುಮಾರ್, ರಮೇಶ್ ಮಾಳಗಿ, ಎಂ. ರಮೇಶ್ , ಓಂಪ್ರಕಾಶ್, ಎ. ಕುಮಾರ್, ಧನರಾಜ್, ಆರ್. ಗಣೇಶ್, ಎ. ವಿಶಾಲ್ ಇದ್ದರು.