

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ಕಾಲೇಜು ದೇಶದ ಶ್ರೇಷ್ಠ ಶಿಕ್ಷಣ ಸಂಸ್ಥೆಯಾಗಿ ವಿಶಿಷ್ಟ ಇತಿಹಾಸ ಹೊಂದಿದೆ. ಉತ್ತರ ಕರ್ನಾಟಕದ ಪಾಲಿಗೆ ಕರ್ನಾಟಕ ಕಾಲೇಜು ಟೆಂಪಲ್ ಆಫ್ ಲರ್ನಿಂಗ್ ಆಗಿದೆ ಎಂದು ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯ ಡಾ. ಐ.ಸಿ. ಮುಳಗುಂದ ಹೇಳಿದರು.
ನಗರದ ಕರ್ನಾಟಕ ಕಾಲೇಜಿನ ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ಕಾಲೇಜಿನ ಆವರಣದಲ್ಲಿರುವ ರೊದ್ದ ಶ್ರೀನಿವಾಸರಾವ್, ಅರಟಾಳ ರುದ್ರಗೌಡ ಮತ್ತು ಸರ್ ಸಿದ್ದಪ್ಪ ಕಂಬಳಿ ಪ್ರತಿಮೆಗಳಿಗೆ ಶನಿವಾರ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ರೊದ್ದ ಶ್ರೀನಿವಾಸರಾವ್, ಅರಟಾಳ ರುದ್ರಗೌಡ ಮತ್ತು ಸರ್ ಸಿದ್ದಪ್ಪ ಕಂಬಳಿ ಅವರು ಕರ್ನಾಟಕ ಕಾಲೇಜಿನ ನಿರ್ಮಾತೃಗಳಾಗಿದ್ದಾರೆ. ಬ್ರಿಟಿಷ್ ಸರ್ಕಾರದ ಆದೇಶದಂತೆ 2 ಲಕ್ಷ ರೂಪಾಯಿ ಠೇವಣಿಯೊಂದಿಗೆ ಕಾಲೇಜಿನ ಸ್ಥಾಪನೆಗೆ ಮುನ್ನುಡಿ ಬರೆದರು. ಇದಕ್ಕೆ ಅನೇಕರು ದೇಣಿಗೆ ನೀಡಿದರು. ಅನೇಕ ನಾಟಕ ಕಂಪನಿಗಳು ದೇಣಿಗೆ ನೀಡಿದವು. ಗಂಧರ್ವ ನಾಟಕ ಕಂಪನಿ ಆ ದಿನಗಳಲ್ಲಿ 409 ರೂಪಾಯಿ ದಾನ ನೀಡಿದ್ದು ವಿಶೇಷ ಎಂದರು.
ಕಲಾ ಕಾಲೇಜಿನ ಜಿಮಖಾನಾದ ಉಪಾಧ್ಯಕ್ಷೆ ಡಾ. ಮಹಾದೇವಿ ಹಿರೇಮಠ, ಡಾ. ಜಗದೀಶ ಗುಡಗೂರ, ಡಾ. ಜಿ.ಎಚ್. ಮಳಿಮಠ, ಡಾ. ಎಂ.ಬಿ. ದಳಪತಿ, ಡಾ. ಸುರೇಶ ಹುಲ್ಲನ್ನವರ, ಡಾ. ರಜನಿ ಎಚ್., ಡಾ. ಒ. ಕೊಟ್ರೇಶ, ಡಾ. ಜೋನ್ ಮಾಡ್ತಾ, ಡಾ. ಎಸ್.ಜಿ. ಜಾಧವ್, ಡಾ. ಎ.ಸಿ. ಕುರಹಟ್ಟಿ, ಡಾ. ವಾಮದೇವ ತಳವಾರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.