ಮಂಗಳೂರು: ಭೂಮಿ ಒದಗಿಸಿದರೆ ಹೊಸ ಕೈಗಾರಿಕಾವಲಯ ಸ್ಥಾಪನೆಗೆ ಅನುಮೋದನೆ ಒದಗಿಸಲು ಸಿದ್ದವಾಗಿರುವುದಾಗಿ ಮಧ್ಯಮ ಮತ್ತು ಬೃಹತ್ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಭರವಸೆ ನೀಡಿದ್ದಾರೆ.
ನಗರದ ಟಿಎಂಎ ಪೈ ಇಂಟರ್ನೇಶನಲ್ ಕನ್ವೆನ್ಶನ್ ಸೆಂಟರ್ ನಲ್ಲಿ ಭಾನುವಾರ ಕರ್ನಾಟಕ ಕರಾವಳಿ ಔದ್ಯೋಗಿಕ ಸಮ್ಮೇಳನವನ್ನು ಅವರು ಉದ್ಘಾಟಿಸಿ ಮಾತನಾಡಿದ ಅವರು,
ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಹೊಸ ಕೈಗಾರಿಕಾ ವಲಯ ಸ್ಥಾಪನೆಗೆ ಉದ್ದೇಶಿಸಲಾಗಿದೆ ಎಂದವರು ಹೇಳಿದರು.
ಸಂಸದ ನಳಿನ್‌ಕುಮಾರ್ ಕಟೀಲ್ ಮಾತನಾಡಿ, ಉದ್ಯಮಶೀಲತೆ ಪ್ರಗತಿಯಲ್ಲಿ ಕರ್ನಾಟಕ ದೇಶದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಉದ್ಯಮಶೀಲತೆಯಲ್ಲಿ ಬೆಂಗಳೂರು ಅಷ್ಟೇ ಅಲ್ಲ ಮಂಗಳೂರನ್ನು ಕೂಡ ರಾಜಧಾನಿ ಮಟ್ಟದಲ್ಲಿ ಬೆಳವಣಿಗೆ ಸಾಧಿಸಬೇಕಿದೆ ಎಂದರು. ಫಿಕ್ಕಿ ಕರ್ನಾಟಕ ಅಧ್ಯಕ್ಷ ಉಲ್ಲಾಸ ಕಾಮತ್ ಮಾತನಾಡಿ, ದೇಶದ ಆರ್ಥಿಕತೆಯಲ್ಲಿ ರಾಜ್ಯದ ಕೊಡುಗೆ ಅಧಿಕ. ದೇಶದಲ್ಲಿ ಜಿಎಸ್‌ಟಿ ಸಂಗ್ರಹಿಸುವಲ್ಲಿ ರಾಜ್ಯ ಎರಡನೇ ಸ್ಥಾನ ಪಡೆದಿದೆ. ಇದರಲ್ಲಿ ಕರಾವಳಿ ಕರ್ನಾಟಕದ ಕೊಡುಗೆಯೂ ಅಧಿಕ. ಹುಬ್ಬಳ್ಳಿ-ಧಾರವಾಡ ಮತ್ತು ಮಂಗಳೂರು ಭಾಗದಲ್ಲೂ ಬೃಹತ್ ವಾಣಿಜ್ಯ ವಲಯ ನಿರ್ಮಾಣ ಮಾಡುವ ಅಗತ್ಯವಿದೆ. ಮುಂದಿನ ಪೀಳಿಗೆಗೆ ಉದ್ಯೋಗ ನೀಡಬೇಕಿದೆ ಎಂದರು.
ಎನ್‌ಎಂಪಿಟಿ ಅಧ್ಯಕ್ಷ ವೆಂಕಟರಮಣ, ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶ, ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಸಿಸಿಐ ಅಧ್ಯಕ್ಷ ಐಸಾಕ್ ವಾಸ್ ಮೊದಲಾದವರು ಉಪಸ್ಥಿತರಿದ್ದರು.