ದಿನವಹಿ ಡೀಸೆಲ್​ ಕೋಟ 500 ಲೀ. ಏರಿಕೆಗೆ ಮನವಿ

udp-20-yashpal
Published on

ಉಡುಪಿ: ದಿನವಹಿ ಡೀಸೆಲ್​ ಕೋಟ 500 ಲೀಟರಿಗೆ ಏರಿಕೆ, ಮಹಿಳಾ ಮೀನುಗಾರರಿಗೆ ಬಡ್ಡಿರಹಿತ ಸಾಲ ಹಾಗೂ ಮೀನು ಒಣಗಿಸುವ ಸ್ಥಳವನ್ನು ರಿಯಾಯಿತಿ ದರದಲ್ಲಿ ಕನಿಷ್ಠ 15 ವರ್ಷಕ್ಕೆ ಗುತ್ತಿಗೆ ನೀಡಬೇಕು. ಮೀನುಗಾರಿಕಾ ಬೋಟ್​ ವಿಮೆಯ ನಿಯಮಾವಳಿ ಸರಳೀಕರಣ ಹಾಗೂ ವಿಮಾ ಪರಿಹಾರ ಮೊತ್ತವನ್ನು ಶೀಘ್ರ ಮಂಜೂರು ಮಾಡಲು ಕ್ರಮಕೈಗೊಳ್ಳುವಂತೆ ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ಪದಾಧಿಕಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಗುರುವಾರ ಬೆಂಗಳೂರಿನಲ್ಲಿ ಕರಾವಳಿ ಮೀನುಗಾರರ ವಿವಿಧ ಸಮಸ್ಯೆ ಬೇಡಿಕೆಗಳ ಬಗ್ಗೆ ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಉಡುಪಿ ಶಾಸಕರಾದ ಯಶ್​ ಪಾಲ್​ ಸುವರ್ಣ ನೇತೃತ್ವದಲ್ಲಿ ಸಚಿವರನ್ನು ಭೇಟಿಯಾದ ನಿಯೋಗ ಮೀನುಗಾರಿಕಾ ಬಂದರಿಗೆ ಸಂಬಂಧಿಸಿದ ರಸ್ತೆ ಹಾಗೂ ಮೂಲ ಸೌಕರ್ಯ ಅಭಿವದ್ಧಿ ಸಹಿತ ವಿವಿಧ ಬೇಡಿಕೆಗಳ ಬಗ್ಗೆ ಮನವಿ ನೀಡಿತು.

1984 ಮೀನುಗಾರಿಕಾ ಕಾಯ್ದೆಯ ನಿಯಮಾವಳಿಗಳನ್ನು ಪ್ರಸ್ತುತ ಸಾಲಿಗೆ ಪೂರಕವಾಗುವಂತೆ ತಿದ್ದುಪಡಿ, ಬಂದರಿನ ಸಮರ್ಪಕ ನಿರ್ವಹಣೆಯ ಹಿತದೃಷ್ಟಿಯಿಂದ ಸ್ಥಳಿಯ ಮೀನುಗಾರಿಕಾ ಸಂಘ ಸಂಸ್ಥೆಗಳಿಗೆ ಅವಕಾಶ ಕಲ್ಪಿಸುವುದು. ಮಲ್ಪೆ ಮೀನುಗಾರಿಕಾ ಬಂದರಿನ ಔಟರ್​ ಹಾರ್ಬರ್​ ಯೋಜನೆ ಮಂಜೂರು, ಡ್ರೆಜಿಂಗ್​ ಹಾಗೂ ವಿವಿಧ ಬಂದರುಗಳ ಅಭಿವೃದ್ಧಿ, ನಾಡದೋಣಿ ಮೀನುಗಾರರಿಗೆ ಸಮರ್ಪಕ ಸೀಮೆ ಎಣ್ಣೆ ಪೂರೈಕೆ ಸಹಿತ ವಿವಿಧ ಬೇಡಿಕೆಗಳ ಬಗ್ಗೆ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು.

ಸಭೆಯಲ್ಲಿ ಮೀನುಗಾರಿಕೆ ಇಲಾಖೆ ನಿರ್ದೇಶಕ ದಿನೇಶ್​ ಕಲ್ಲೇರ್​, ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷರಾದ ದಯಾನಂದ ಸುವರ್ಣ, ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿಯ ಪದಾಧಿಕಾರಿಗಳಾದ ರಾಮಚಂದ್ರ ಕುಂದರ್​, ಸೋಮನಾಥ ಕಾಂಚನ್​, ಮೋಹನ್​ ಬೆಂಗ್ರೆ, ಚೇತನ್​ ಬೆಂಗ್ರೆ, ನವೀನ್​ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net