ವೈರಲ್​ ಆಗಿದ್ದ ರ‍್ಯಾಪಿಡ್‌ ರಸ್ತೆ; ಸಿಎಂ ಯಾವ ಆಧಾರದಲ್ಲಿ ಇದನ್ನು ಪರಿಗಣಿಸಲಿದ್ದಾರೆ?

rapid road
Published on

ಬೆಂಗಳೂರು: ಕೆಲವೇ ದಿನಗಳ ಹಿಂದೆ ರ‍್ಯಾಪಿಡ್‌ ರಸ್ತೆ ವೈರಲ್​ ಆಗಿತ್ತು. ಕೆಲವೇ ಗಂಟೆಗಳಲ್ಲಿ ಮೊದಲೇ ತಯಾರಿಸಿದ್ದ ಸ್ಲಾಬ್​ಗಳನ್ನು ಕೂರಿಸಿ ರಸ್ತೆ ತಯಾರಿಸುವ ವಿಡಿಯೋ ಎಲ್ಲೆಡೆ ವೈರಲ್​ ಆಗಿತ್ತು. ಇದೀಗ ಈ ಹೊಸ ಮಾದರಿಯ ರಸ್ತೆಯನ್ನು ಪರಿಗಣಿಸ ಬೇಕೋ ಬೇಡವೋ ಎಂಬುದರ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡಿದ್ದಾರೆ.

ಮುಖ್ಯಮಂತ್ರಿ ಬೊಮ್ಮಾಯಿ ಇಂದು ಬಿಬಿಎಂಪಿ ವತಿಯಿಂದ ಸಿ.ವಿ.ರಾಮನ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ನಿರ್ಮಿಸಿರುವ ರ‍್ಯಾಪಿಡ್‌ ರಸ್ತೆಯನ್ನು ಉದ್ಘಾಟಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ಸಂದರ್ಭ 'ಉತ್ತಮ ರಸ್ತೆ ಗಳ ಜೊತೆಗೆ ವೆಚ್ಚವೂ ಕಡಿಮೆಯಿರುವುದು ಬಹಳ ಮುಖ್ಯ. ಈ ಕುರಿತು ವರದಿಗಳು ಬಂದ ನಂತರ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು.

ಬೆಂಗಳೂರಿನ ರಸ್ತೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಸಂಚಾರ ವ್ಯವಸ್ಥೆ ಯನ್ನು ಬದಲಾಯಿಸುವುದು, ವಾಹನ ದಟ್ಟಣೆಯಂತಹ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೆವು. ವೈಟ್ ಟಾಪಿಂಗ್ ಮಾಡುವುದು ಬಹಳ ಸಮಯ ತೆಗೆದುಕೊಳ್ಳುತ್ತದೆ. ಒಂದು ಬಾರಿ ವೈಟ್ ಟಾಪಿಂಗ್ ಆದ ನಂತರ ಸಮಸ್ಯೆ ಉಂಟಾದಲ್ಲಿ ಪುನಃ ಅದನ್ನು ಒಡೆದು ತೆಗೆಯುವುದು ದೊಡ್ಡ ಆತಂಕದ ಕೆಲಸ. ಅದಕ್ಕೆಂದೇ ರ‍್ಯಾಪಿಡ್‌ ರಸ್ತೆ ತಂತ್ರಜ್ಞಾನ ಬಂದಿದೆ. ಅದನ್ನು ಪರಿಶೀಲಿಸಲು ಬಂದಿದ್ದು, ಹಲವಾರು ಸೂಚನೆಗಳನ್ನು ನೀಡಿದ್ದೇನೆ.

ಭಾರಿ ವಾಹನಗಳ ಚಲನೆಯಿಂದ ಆಗುವ ಪರಿಣಾಮಗಳ ಬಗ್ಗೆ ಸಂಪೂರ್ಣ ವರದಿ ಬೇಕೆಂದು ಸೂಚಿಸಿದ್ದೇನೆ. ಅಂತಿಮವಾಗಿ ಕಾಮಗಾರಿಯು ಕ್ಷಿಪ್ರವಾಗಿ ಆಗಬೇಕು, ಗುಣಮಟ್ಟವಿರಬೇಕು ಹಾಗೂ ವೆಚ್ಚವೂ ಸೂಕ್ತವಾಗಿರಬೇಕು ಎಂದು ಸೂಚಿಸಿದ್ದೇನೆ' ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಸುದ್ದಿಗಾರರು 'ಈ ರಸ್ತೆಗಳಿಗೆ ವೈಟ್ ಟಾಪಿಂಗ್ ಗಿಂತ ಶೇ 30 ರಷ್ಟು ಹೆಚ್ಚು ವೆಚ್ಚವಾಗುತ್ತಾ? ಎಂದು ಕೇಳಿದ್ದಾರೆ ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ 'ವೆಚ್ಚವನ್ನು ಕಡಿತಗೊಳಿಸಬೇಕು. ನಮ್ಮ ಎಸ್.ಆರ್.ದರಗಳಿಗೆ ಹೊಂದುವಂತಿದ್ದರೆ ಮಾತ್ರ ಇದನ್ನು ಪರಿಗಣಿಸಲಾಗುವುದು ಎಂದು ಸ್ಪಷ್ಟವಾಗಿ ತಿಳಿಸಿದ್ದೇನೆ' ಎಂದು ಸ್ಪಷ್ಟನೆ ನೀಡಿದರು.

ಏನಿದು ರ‌್ಯಾಪಿಡ್ ರೋಡ್?
ಸಿಲಿಕಾನ್ ಸಿಟಿಯಲ್ಲಿ ಸಂಚಾರ ದಟ್ಟಣೆ ತಡೆಗೆ ಹಾಗೂ ಗುಣಮಟ್ಟ ರಸ್ತೆ ನಿರ್ಮಾಣದ ಉದ್ದೇಶದಿಂದ ಬಿಬಿಎಂಪಿ ವತಿಯಿಂದ ದೇಶದಲ್ಲೇ ಮೊದಲ ಬಾರಿಗೆ ವಿನೂತನ ‘ರ‌್ಯಾಪಿಡ್ ರೋಡ್’ ತಂತ್ರಜ್ಞಾನ ಜಾರಿಗೆ ಬಂದಿದೆ. ಹಳೆ ಮದ್ರಾಸ್ ರಸ್ತೆಯ ಹೊಸ ಬಿನ್ನಮಂಗಲ ವೃತ್ತದ ಬಳಿ ಪ್ರಾಯೋಗಿಕವಾಗಿ ಈ ತಂತ್ರಜ್ಞಾನದಡಿ 375 ಮೀ. ಉದ್ದದ ರ‌್ಯಾಪಿಡ್ ರಸ್ತೆ ನಿರ್ಮಿಸಲಾಗಿದೆ. ಮೊದಲಿಗೆ ರಸ್ತೆಯನ್ನು ಸಮತಟ್ಟಾಗಿ ಮಾಡಿಕೊಂಡು ಅದರ ಮೇಲೆ ಫ್ರೀಕಾಸ್ಟ್ ಪ್ಯಾನಲ್ ಅಳವಡಿಸಲಾಗುತ್ತದೆ. ಪ್ರತಿ ಫ್ರೀಕಾಸ್ಟ್ ಪ್ಯಾನಲ್ 4 ರಂಧ್ರಗಳಿರಲಿದ್ದು, ಇದರ ಮೇಲೆ ವಾಹನಗಳು ಸಂಚರಿಸುವಾಗ ಅಲುಗಾಡದಂತೆ ಒಂದು ಪ್ಯಾನಲ್ನಿಂದ ಮತ್ತೊಂದು ಪ್ಯಾನಲ್ಗೆ ಹೈ ಟೆನ್ಸಿಲ್ ಸ್ಟೀಲ್ ಕೇಬಲ್ ಮಾಡಲಾಗುತ್ತದೆ. ಇದರಿಂದ. ಎಷ್ಟೇ ಅಧಿಕ ಭಾರದ ವಾಹನಗಳು ಸಂಚಾರಿಸಿದರು ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಒಂದು ಫ್ರೀಕಾಸ್ಟ್ ಪ್ಯಾನಲ್ 5 ಅಡಿ ಅಗಲ, 20 ಅಡಿ ಉದ್ದ ಹಾಗೂ 7 ಇಂಚು ದಪ್ಪವಿರುತ್ತದೆ. ಪ್ರತಿ 45 ಮೀ.ಗೂ ರ‌್ಯಾಪಿಡ್ ಹಾರ್ಡನಿಂಗ್ ಕಾಂಕ್ರೀಟ್ ಹಾಕಲಾಗುತ್ತದೆ. ಇವುಗಳನ್ನು ಬೇರೆಡೆ ತಯಾರಿಸಿ ಕ್ಯೂರಿಂಗ್ ಮಾಡಿಕೊಂಡು ತರಲಾಗುತ್ತದೆ. ಇದರಿಂದ ರಸ್ತೆ ಕ್ಯೂರಿಂಗ್ ಮಾಡುವ ಅವಶ್ಯಕತೆ ಇರುವುದಿಲ್ಲ. ರಸ್ತೆಗಳ ವಿನ್ಯಾಸಕ್ಕೆ ತಕ್ಕಂತೆ ಪ್ಯಾನಲ್ ತಯಾರಿಸಲಾಗುತ್ತದೆ. ರಸ್ತೆಗಳ ಅಭಿವೃದ್ಧಿ ಸಂದರ್ಭದಲ್ಲಿ ಇವುಗಳನ್ನು ಅಳವಡಿಸಿದ ತಕ್ಷಣ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬಹುದು.

ದೇಶದಲ್ಲೇ ಮೊದಲು:
ಆದಿತ್ಯ ಬಿರ್ಲಾ ಅಲ್ಟ್ರಾ ಟೆಕ್ ಸಂಸ್ಥೆ ಸಹಯೋಗದೊಂದಿಗೆ ಬಿಬಿಎಂಪಿ, ರ‌್ಯಾಪಿಡ್ ರಸ್ತೆ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ. ಈ ತಂತ್ರಜ್ಞಾನದಡಿ ನಿರ್ಮಿಸಿದ್ದ ರಸ್ತೆಯು ದೀರ್ಘಕಾಲ ಬಾಳಿಕೆ ಬರಲಿದೆ. ಇದು ದೇಶದಲ್ಲೇ ಮೊದಲ ಬಾರಿಗೆ ವಿನೂತನ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸಿದ್ದ ಹೆಗ್ಗಳಿಕೆಗೆ ಪಾಲಿಕೆ ಪಾತ್ರವಾಗಿದೆ. ರಸ್ತೆಗಳು ಡಾಂಬರೀಕರಣ, ವೈಟ್ ಟಾಪಿಂಗ್ ಮತ್ತು ಟೆಂಡರ್ ಶ್ಯೂರ್ ಕಾಮಗಾರಿ ವೆಚ್ಚಗಿಂತ ಶೇ.25 ಹೆಚ್ಚಿದೆ. ಅಮೆರಿಕದಲ್ಲಿ ಇದೇ ಮಾದರಿ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಅದೇ ಮಾದರಿ ರಸ್ತೆಗಳನ್ನು ನಗರದಲ್ಲಿ ನಿರ್ಮಾಣ ಮಾಡುವುದರಿಂದ ಹಲವು ಅನುಕೂಲಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net