

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಇಲ್ಲಿಯ ರಾಜನಗರ ಕೆಎಸ್ಸಿಎ ಮೈದಾನದಲ್ಲಿ ಪ್ರಸಕ್ತ ಋತುವಿನ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಸೆಣಸಲಿರುವ ಆತಿಥೇಯ ಕರ್ನಾಟಕ ಹಾಗೂ ಚಂಡೀಗಢ ತಂಡಗಳ ಆಟಗಾರರು ಬುಧವಾರ (ಫೆ. 14)ದಂದು ನಗರಕ್ಕೆ ಆಗಮಿಸಲಿದ್ದಾರೆ.
ಮಧ್ಯಾಹ್ನ 1.30ಕ್ಕೆ ಆಗಮಿಸುವ ಚಂಡೀಗಡ ತಂಡ ಗೋಕುಲ ರಸ್ತೆ ಹೋಟೆಲ್ ಫೆರ್ನ್ನಲ್ಲಿ ತಂಗಲಿದೆ. ಕರ್ನಾಟಕ ತಂಡದ ಆಟಗಾರರು ರಾತ್ರಿ 8.30ಕ್ಕೆ ಆಗಮಿಸಲಿದ್ದು, ಹೋಟೆಲ್ ಫಾರ್ಚೂನ್ನಲ್ಲಿ ವಾಸ್ತವ್ಯ ಮಾಡುವರು. ಉಭಯ ತಂಡಗಳ ಆಟಗಾರರು ಮೈದಾನದಲ್ಲಿ ಗುರುವಾರ ಅಭ್ಯಾಸ ನಡೆಸುವರು. ಫೆ. 16ರಿಂದ 19ರವರೆಗೆ ಪಂದ್ಯ ನಡೆಯಲಿದೆ.
ಒಂದು ರಣಜಿ ಋತುವಿನ ಎರಡು ಲೀಗ್ ಪಂದ್ಯಗಳು ಹುಬ್ಬಳ್ಳಿಗೆ ಹಂಚಿಕೆಯಾಗಿದ್ದು ಇದೇ ಮೊದಲು. ಪ್ರಸಕ್ತ ರಣಜಿ ಋತುವಿನ ಮೊದಲ ಲೀಗ್ ಪಂದ್ಯ ಇದೇ ಮೈದಾನದಲ್ಲಿ ಜ. 5ರಿಂದ 8ವರೆಗೆ ನಡೆದಿತ್ತು. ಪಂಜಾಬ್ ವಿರುದ್ಧ ಕರ್ನಾಟಕ ಜಯಗಳಿಸಿ ಶುಭಾರಂಭ ಮಾಡಿತ್ತು. ಇದೀಗ ಕೊನೆಯ ಲೀಗ್ ಪಂದ್ಯದಲ್ಲಿ ಚಂಡೀಗಢ ತಂಡವನ್ನು ಎದುರಿಸಲಿದೆ.
ಸಿ ಗುಂಪಿನಲ್ಲಿರುವ ಕರ್ನಾಟಕ ಆಡಿರುವ 6 ಪಂದ್ಯಗಳಲ್ಲಿ 3 ಗೆಲುವಿನೊಂದಿಗೆ 24 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಚಂಡೀಗಢ ಆಡಿರುವ 6 ಪಂದ್ಯಗಳಲ್ಲಿ ಯಾವುದೇ ಗೆಲುವನ್ನು ಕಾಣದೇ ಕೇವಲ 5 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ.
ಮೊದಲ ಲೀಗ್ ಪಂದ್ಯದಂತೆ ಈ ಪಂದ್ಯಕ್ಕೂ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಧಾರವಾಡ ವಲಯದ ಸಂಚಾಲಕ ನಿಖಿಲ್ ಭೂಸದ ತಿಳಿಸಿದ್ದಾರೆ.