ನಂದಿಗಿರಿಯಲ್ಲಿ ಸಚಿವ ಸಂಪುಟ ಸಭೆ: ಸಿಎಂಗೆ ಪತ್ರ ಬರೆದು ಪ್ರಶ್ನೆಗಳನ್ನು ಕೇಳಿದ ಹೋರಾಟಗಾರರು

13cbp1-1.jpg
Published on

ಚಿಕ್ಕಬಳ್ಳಾಪುರ: ಪ್ರವಾಸಿತಾಣ ನಂದಿ ಗಿರಿಧಾಮದಲ್ಲಿ ಜೂ.೧೯ ರಂದು ನಡೆಯಲಿರುವ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲು ಹೋರಾಟ ಸಮಿತಿಯು ಒತ್ತಾಯಿಸಿದೆ.
ತಾಲೂಕಿನ ನಾಯನಹಳ್ಳಿಯಲ್ಲಿ ಶುಕ್ರವಾರ ಕೈಗೊಂಡಿದ್ದ ಸಭೆಯಲ್ಲಿ ನೀರಾವರಿ ಯೋಜನೆಯ ಅನುಷ್ಠಾನ ಪ್ರಗತಿ, ಸೌಲಭ್ಯದ ಸಾಧಕ ಬಾಧಕಗಳು, ಸರ್ಕಾರದ ಸ್ಪಂದನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಇದೇ ವೇಳೆ ಸ್ಥಳೀಯ ಜನಪ್ರತಿನಿಧಿಗಳ ಅಸಡ್ಡೆ ಧೋರಣೆಗೆ ಕಿಡಿಕಾರಿದ ಹೋರಾಟಗಾರರು, ರಾಜ್ಯ ಸರ್ಕಾರದಿಂದ ಮಹತ್ವದ ತೀರ್ಮಾನ ಘೋಷಣೆಯಾಗದಿದ್ದಲ್ಲಿ ಜೂನ್ ಬಳಿಕ ದಿಟ್ಟ ನಿಲುವಿನ ಮತ್ತೊಂದು ಸುತ್ತಿನ ಹೋರಾಟಗಳನ್ನು ಕೈಗೊಳ್ಳುವ ಎಚ್ಚರಿಕೆ ನೀಡಿದರು. ಈಗಾಗಲೇ ಸಿಎಂ ಸಿದ್ದರಾಮಯ್ಯಗೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ ಪತ್ರ ಬರೆದಿದ್ದಾರೆ.

*ಸರ್ಕಾರಕ್ಕೆ ಹಲವು ಪ್ರಶ್ನೆಗಳು
ಶಾಶ್ವತ ನೀರಾವರಿ ಹೋರಾಟ ಸಮಿತಿಯು ರಾಜ್ಯ ಸರ್ಕಾರಕ್ಕೆ ನೀರಾವರಿ ವಿಚಾರವಾಗಿ ಹಲವು ಪ್ರಶ್ನೆಗಳನ್ನು ಕೇಳಿ, ಉತ್ತರಗಳನ್ನು ಬಯಸಿದೆ.
ಬರಪೀಡಿತ ಜಿಲ್ಲೆಗಳಿಗೆ ಶುದ್ದವಾದ ಕುಡಿಯುವ ನೀರು ಪೂರೈಕೆಯ ಭರವಸೆ ನೀಡಿ ೧೫ ವರ್ಷಗಳಾದರೂ ಬೊಗಸೆಯಷ್ಟು ಕೊಡಲು ಏಕೆ ಸಾಧ್ಯವಾಗಿಲ್ಲ?. ಕೇಂದ್ರೀಯ ಜಲ ಆಯೋಗವು ೨೦೧೨ ರಲ್ಲಿಯೇ ಎತ್ತಿನಹೊಳೆ ಯೋಜನೆಯಡಿ ನಿರೀಕ್ಷೆಯ ನೀರು ಸಿಗುವುದಿಲ್ಲ ಎಂದು ನೀಡಿರುವ ವರದಿಯ ಅಸಡ್ಡೆ ಏಕೆ? ಭಾರತೀಯ ವಿಜ್ಞಾನ ಸಂಸ್ಥೆಯು ಎತ್ತಿನಹೊಳೆಯಿಂದ ೮ ಟಿಎಂಸಿಗಿಂತಲೂ ಕಡಿಮೆ ನೀರು ಲಭ್ಯತೆಯ ಬಗ್ಗೆ ಹೇಳಿದ್ದರೂ ೨೪ ಟಿಎಂಸಿ ನೀರು ಹರಿಸುವ ಸುಳ್ಳು ಆಶ್ವಾಸನೆಯ ಉದ್ದೇಶ ಏನು?. ಎತ್ತಿನಹೊಳೆ ಯೋಜನೆ ಅವೈಜ್ಞಾನಿಕ ಎಂದಿದ್ದರೂ ೨೪ ಸಾವಿರ ಕೋಟಿ ರೂ ಖರ್ಚಿನ ಗುಟ್ಟೇನು?.ಕೆ.ಸಿ ಹಾಗೂ ಎಚ್.ಎನ್.ವ್ಯಾಲಿ ಯೋಜನೆಯ ನೀರನ್ನು ಮೂರನೇ ಹಂತದಲ್ಲಿ ಶುದ್ದೀಕರಣದ ಶಿಫಾರಸ್ಸಿನ ಸಿಪಿಎಚ್‌ಇಇಓ ಮಾನದಂಡ ಉಲ್ಲಂಘನೆಗೆ ಕಾರಣಗಳೇನು? ಎನ್ನುವುದು ಸೇರಿದಂತೆ ಹಲವು ಪ್ರಶ್ನೆಗಳನ್ನು ಕೇಳಿದೆ.
ಈಗಾಗಲೇ ಎಲ್ಲ ಸರ್ಕಾರಗಳಿಗೂ ಇಲ್ಲಿನ ನೀರಾವರಿ ಸಮಸ್ಯೆ, ನಿರೀಕ್ಷೆಯ ಯೋಜನೆಗಳ ಜಾರಿಯ ಅಗತ್ಯತೆಯ ಬಗ್ಗೆ ಗಮನ ಸೆಳೆಯಲಾಗಿದೆ. ಆದರೆ, ಚುನಾವಣಾ ಪೂರ್ವ ನೀಡಿದ ಭರವಸೆಯಂತೆ ಜನಪ್ರತಿನಿಧಿಗಳು ಅಧಿಕಾರಕ್ಕೆ ಬಂದ ಬಳಿಕ ನಡೆದುಕೊಳ್ಳುತ್ತಿಲ್ಲ. ಇದಕ್ಕೆ ಬಡಿದೆಬ್ಬಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ತೀವ್ರ ಸ್ವರೂಪದ ಹೋರಾಟದ ಅಗತ್ಯವಿದೆ. ಇದಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ಮನವಿ ಮಾಡಿದರು.
ಸಭೆಯಲ್ಲಿ ಸಮಿತಿ ಉಪಾಧ್ಯಕ್ಷ ಮಳ್ಳೂರು ಹರೀಶ್, ಹೋರಾಟಗಾರರಾದ ಎಸ್.ಲಕ್ಷ್ಮಯ್ಯ, ಸುಷ್ಮಾ ಶ್ರೀನಿವಾಸ್, ತಿಪ್ಪೇನಹಳ್ಳಿ ನಾರಾಯಣಸ್ವಾಮಿ, ವಿ.ರವಿಕುಮಾರ್, ಮಂಚನಬಲೆ ಶ್ರೀನಿವಾಸ್, ಲೋಕೇಶ್ ಗೌಡ, ಉಷಾ ಮತ್ತಿತರರು ಭಾಗವಹಿಸಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net