ಸಂಪುಟ ಸರ್ಜರಿ ಸನ್ನಿಹಿತ: ಮುಂದಿನ ವಾರವೇ ವರಿಷ್ಠರಿಂದ ಮುಹೂರ್ತ?

Published on

ಬೆಂಗಳೂರು: ಅನಿಶ್ಚಿತತೆ, ತರ್ಕ, ತೆರೆಮರೆ ಲಾಬಿ, ಆಕಾಂಗಳ ಅಭಿಲಾಷೆ ಎಲ್ಲವನ್ನೂ ಏಕಕಾಲಕ್ಕೆ ಕೊನೆಗಾಣಿಸಲು ಮುಂದಾಗಿರುವ ಬಿಜೆಪಿ ವರಿಷ್ಠರು ಮುಂದಿನ ವಾರದ ಮಧ್ಯ ಭಾಗದಲ್ಲಿ ರಾಜ್ಯ ಸಚಿವ ಸಂಪುಟದ ಸರ್ಜರಿಗೆ ಕೈಹಾಕುವ ಸಾಧ್ಯತೆ ದಟ್ಟವಾಗಿದೆ. ಸರ್ಜರಿ ದೊಡ್ಡ ಪ್ರಮಾಣದ್ದೋ? ಅಲ್ಪ ಪ್ರಮಾಣದ್ದೋ? ಎಂಬ ಕುತೂಹಲವಷ್ಟೇ ಬಾಕಿ ಉಳಿದಿದ್ದು, ಒಟ್ಟಾರೆ ಮಹತ್ವದ ಬದಲಾವಣೆಯಾಗುವ ಲಕ್ಷಣ ಗೋಚರಿಸಿದೆ. ರಾಜಕೀಯದಲ್ಲಿ ಪ್ರಚಲಿತವಾಗಿದ್ದ ಕಾಮರಾಜ್​ ಸೂತ್ರ ಹೋಗಿ ಗುಜರಾತ್​ ಮಾದರಿ ಚಾಲ್ತಿಗೆ ಬಂದಿದೆ. ಕರ್ನಾಟಕ ತನ್ನದೇ ಆದ ಮಾದರಿ ಅಳವಡಿಸಿಕೊಳ್ಳುವ ಸಂಭಾವ್ಯತೆ ಹೆಚ್ಚಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.

ಬಲ ತುಂಬಲು ಒತ್ತು: ಈಗಿನ ದಾರಿಯಲ್ಲೇ ಸಾಗಿದರೆ ಮಿಷನ್​ 150 ಪ್ಲಸ್​ ಕಷ್ಟಸಾಧ್ಯವೆಂದು ವರಿಷ್ಠರು ಮನಗಂಡಿದ್ದು, ಪಕ್ಷದ ಹಿರಿಯ ನಾಯಕರು, ಸಂ ಪರಿವಾರದ ಪ್ರಮುಖರು ಕಳೆದ ವಾರ ಸಭೆ ಸೇರಿ ರೂಪು&ರೇಷೆ ಸಿದ್ಧಪಡಿಸಿದ್ದಾರೆ. ಸರ್ಕಾರ ಮತ್ತು ಪಕ್ಷಕ್ಕೆ ಬಲ ತುಂಬಲೆಂದು ನಿರ್ಣಾಯಾತ್ಮಕ ಕ್ರಮ ಕೈಗೊಳ್ಳಲಿದ್ದಾರೆ. ಸಚಿವ ಸಂಪುಟ ವಿಸ್ತರಣೆಗಿಂತ ಪುನಾರಚನೆಗೆ ಹೆಚ್ಚಿನ ಒಲವಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ವದಂತಿ ತರಹೇವಾರಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇದ್ದಲ್ಲಿಗೇ ಸಿಎಂ ಬೊಮ್ಮಾಯಿ ತರಾತುರಿಯಿಂದ ತೆರಳಿ ಗೌಪ್ಯ ಮಾತುಕತೆ ನಡೆಸಿರುವುದು ತರಹೇವಾರಿ ವದಂತಿಗೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಬಸವ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೋಶಿ ಭಾಗವಹಿಸಿ ಹುಬ್ಬಳ್ಳಿಗೆ ತೆರಳುವುದಕ್ಕಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣ ತಲುಪಿದ್ದರು. ಬೊಮ್ಮಾಯಿ ದಿಢೀರ್​ನೆ ನಿಲ್ದಾಣಕ್ಕೆ ಧಾವಿಸಿ ಜೋಶಿ ಜತೆಗೆ ಚರ್ಚಿಸಿದ್ದು, ಸಚಿವ ಆರ್​.ಅಶೋಕ್​ ಹಾಗೂ ಮಾಜಿ ಡಿಸಿಎಂ ಲಕ್ಷ$್ಮಣ ಸವದಿ ಇದ್ದರು ಎಂದು ಮೂಲಗಳು ತಿಳಿಸಿವೆ. ಜೋಶಿ ಬುಲಾವ್​ ನೀಡಿದರಾ ? ಅಥವಾ ತುರ್ತು ಮಾಹಿತಿ ನೀಡಲೆಂದು ಹೋದರಾ ? ಎಂಬ ಪ್ರಶ್ನೆಗಳು ಪಕ್ಷದೊಳಗೆ ಸುಳಿದಾಡುತ್ತಿದ್ದು, ಮಹತ್ವದ ಮುನ್ಸೂಚನೆ ಸಿಕ್ಕಿರಬಹುದು ಎಂಬ ತರ್ಕಕ್ಕೆ ಅವಕಾಶ ಮಾಡಿಕೊಟ್ಟಿದೆ. ಶನಿವಾರ ನಡೆದ ಬೇರೆ ಪಕ್ಷದ ಮುಖಂಡರ ಬಿಜೆಪಿ ಸೇರ್ಪಡೆಗೆ ಸ್ಥಳಿಯ ಮುಖಂಡರ ವಿರೋಧ ಇದ್ದು, ಕೇಂದ್ರ ವರಿಷ್ಠರಿಂದ ಪಡೆಯುವ ಬಗ್ಗೆ ಜೋಶಿ ಅವರೊಂದಿಗೆ ಈ ಸಂದರ್ಭದಲ್ಲಿ ಚರ್ಚೆ ನಡೆಯಿತು ಎಂದು ಹೇಳಲಾಗಿದೆ.

ಸಂಪುಟ ಸಭೆ ಡೋಲಾಯಮಾನ: ಬಿಜೆಪಿ ಆಂತರಿಕ ಬೆಳವಣಿಗೆಗೂ ಸಚಿವ ಸಂಪುಟ ಸಭೆ ಮುಂದೂಡಿಕೆ, ಸಮಯ ಬದಲಾವಣೆಗೆ ನಂಟು ಬೆಸೆಯಲಾಗುತ್ತಿದ್ದು, ಸಚಿವ ಸಂಪುಟ ಸಭೆಯೇ ಸದ್ಯಕ್ಕೆ ಡೋಲಾಯಮಾನವಾಗಿದೆ. ಮೇ 5ರ ಬೆಳಗ್ಗೆ 11ಕ್ಕೆ ನಿಗದಿಯಾಗಿದ್ದ ಸಚಿವ ಸಂಪುಟ ಸಭೆ ಮೇ 11ರ ಬೆಳಗ್ಗೆ 11ಕ್ಕೆ ಮುಂದೂಡಿಕೆಯಾಗಿದೆ. ನಂತರ ಅದೇ ದಿನ ಸಂಜೆ 4ಕ್ಕೆ ಎಂದು ಮತ್ತೆ ಪರಿಷ್ಕರಣೆಯಾಗಿದೆ. ಪರಿಷತ ವೇಳಾಪಟ್ಟಿ ಪ್ರಕಾರ ಮೇ 11ರ ಸಂಜೆ 4ಕ್ಕೂ ಈ ಸಭೆ ನಡೆಯುವುದು ಅನುಮಾನವೆಂದು ಮೂಲಗಳು ಹೇಳಿವೆ.

ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ. 2023ರವರೆಗೂ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಸಿಎಂ ನನ್ನನ್ನು ಭೇಟಿ ಮಾಡಿದ್ದರಲ್ಲಿ ವಿಶೇಷತೆ ಇಲ್ಲ. ಇಬ್ಬರೂ ಒಂದೇ ಪಕ್ಷದ ನಾಯಕರು. ಹೀಗಾಗಿ, ಭೇಟಿ ಆಗುತ್ತಿರುತ್ತೇವೆ. ಸಂಪುಟ ವಿಸ್ತರಣೆ ಬಗ್ಗೆ ನನ್ನ ಬಳಿ ಯಾವುದೇ ಮಾಹಿತಿ ಇಲ್ಲ. ಈ ಕುರಿತು ಹೈಕಮಾಂಡ್​ ನಿರ್ಧಾರ ತೆಗೆದುಕೊಳ್ಳುತ್ತದೆ.  | ಪ್ರಲ್ಹಾದ್​ ಜೋಶಿ, ಕೇಂದ್ರ ಸಚಿವ

10ಕ್ಕೆ ದೆಹಲಿಗೆ ಬೊಮ್ಮಾಯಿ ವರಿಷ್ಠರು ರವಾನಿಸಿರುವ ಸಂದೇಶದ ಪ್ರಕಾರ ಸಿಎಂ ಬೊಮ್ಮಾಯಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಜತೆಯಾಗಿಯೇ ಮೇ 10ರಂದು ದೆಹಲಿ ವಿಮಾನ ಹತ್ತಲಿದ್ದಾರೆ ಎಂದು ಹೇಳಲಾಗುತ್ತಿದೆ. ವರಿಷ್ಠರು ಚರ್ಚಿಸಿದ ಬಳಿಕ ಪಟ್ಟಿಯನ್ನು ಬೊಮ್ಮಾಯಿ ಕೈಗಿಟ್ಟು ಕಳುಹಿಸಿದರೂ ಅಚ್ಚರಿಯಿಲ್ಲ ಎನ್ನುತ್ತವೆ ಮೂಲಗಳು.

ಸಂಭಾವ್ಯ ನಡೆ

1- ಖಾಲಿಯಿರುವ ಐದು ಸ್ಥಾನಗಳ ಭರ್ತಿ

2- ಖಾತೆಗಳಲ್ಲಿ ಆಮೂಲಾಗ್ರ ಬದಲಾವಣೆ

3- ಕೆಲವರನ್ನು ಕೈಬಿಟ್ಟು ಹೊಸಬರಿಗೆ ಮಣೆ

4- ಸಿಎಂ ಸಹಿತ ಸಂಪುಟ ಪೂರ್ಣ ಬದಲು

ಮೂರು ದಿನದಲ್ಲಿ ಪುನಾರಚನೆ

ರಾಜಕೀಯ ವಲಯದಲ್ಲಿ ಸಂಪುಟ ಸರ್ಜರಿಯ ಕುತೂಹಲ ಇರುವಾಗಲೇ ಮುಂದಿನ ಮೂರು ದಿನಗಳಲ್ಲಿ ಸಂಪುಟ ಪುನಾರಚನೆ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಹೇಳಿದ್ದಾರೆ. ದುಬೈಗೆ ತೆರಳುವ ಮುನ್ನ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸಂಪುಟ ಪುನಾರಚನೆ ಅಥವಾ ವಿಸ್ತರಣೆಯ ವಿಚಾರವಾಗಿ ಹೈಕಮಾಂಡ್​ ಕೈಗೊಳ್ಳುವ ನಿರ್ಧಾರವೇ ಅಂತಿಮ. ಅವರ ತಿರ್ಮಾನಕ್ಕೆ ಬದ್ಧ ಎಂದರು. ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿಕೆಗೆ ಪ್ರತಿಕ್ರಿಯೆ ಬಯಸಿದಾಗ, ಯತ್ನಾಳ್​ ಹೇಳಿಕೆ ಬಗ್ಗೆ ನಾನೇನೂ ಮಾತಾಡಲ್ಲ. ಪದ ನಾಯಕರಿದ್ದಾರೆ, ಅವರು ನೋಡಿಕೊಳ್ಳುತ್ತಾರೆ ಎಂದರು.

ಪ್ರಧಾನಿ ಮೋದಿ ಸಮ್ಮತಿ ಬಾಕಿ

ಚುನಾವಣೆ ಪೂರ್ವ ತಯಾರಿಗೆ ಉನ್ನತ ನಾಯಕರು ಬಿರುಸಿನ ಕಸರತ್ತು ನಡೆಸಿದ್ದಾರೆ. ಗುಜರಾತ್​ ಜತೆಗೆ ಕರ್ನಾಟಕಕ್ಕೂ ಅಷ್ಟೇ ಪ್ರಾಮುಖ್ಯತೆ ನೀಡಿ ವಿಸತವಾಗಿ ಸಮಾಲೋಚಿಸಿದ್ದಾರೆ. ಸಂ ಪರಿವಾರ ಹಾಗೂ ಬಿಜೆಪಿ ರಾಷ್ಟ್ರೀಯ ಮುಖಂಡರು ಇತ್ತೀಚೆಗೆ ಸಭೆ ನಡೆಸಿ ವಿಸ್ತರಣೆ ಹಾಗೂ ಪುನಾರಚನೆಗೆ ಸಂಬಂಧಿಸಿದ ಎರಡೂ ಸೂತ್ರ ಸಿದ್ಧ ಮಾಡಿ ಪ್ರಧಾನಿ ನರೇಂದ್ರ ಮೋದಿಯವರ ಮುಂದಿಟ್ಟಿದ್ದು, ಅವರು ಒಪ್ಪಿಗೆ ನೀಡುವುದು ಬಾಕಿಯಿದೆ. ಎರಡು ದಿನದಲ್ಲಿ ಅವರು ತಮ್ಮ ಅಭಿಪ್ರಾಯವನ್ನು ತಿಳಿಸಲಿದ್ದಾರೆ. ಆ ನಂತರ ಉಳಿದ ಬೆಳವಣಿಗೆಗಳು ನಡೆಯಲಿವೆ ಎಂದು ಪಕ್ಷದ ಉನ್ನತ ಮೂಲಗಳು ಖಚಿತಪಡಿಸಿವೆ. ಏಪ್ರಿಲ್​ ಅಂತಿಮ ವಾರದಲ್ಲಿ ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​ ಭಾರತ ಭೇಟಿ, ಅಂತಾರಾಷ್ಟ್ರೀಯ ಪ್ರಮುಖ ವಿದ್ಯಮಾನ, ನಂತರ ಯೂರೋಪ್​ ಪ್ರವಾಸದಿಂದ ಮೋದಿಗೆ ಬಿಡುವು ಸಿಕ್ಕಿಲ್ಲ. ಯೂರೋಪ್​ನಿಂದ ವಾಪಸಾಗುತ್ತಲೇ ದೇಶದ ಹಲವು ವಿಷಯಗಳ ಬಗ್ಗೆ ಉನ್ನತಮಟ್ಟದ ಚರ್ಚೆ, ಸಭೆ ನಡೆಸಿದ್ದು, ಪಕ್ಷದ ಕಾರ್ಯತಂತ್ರಗಳತ್ತಲೂ ಗಮನ ಹರಿಸಲಿದ್ದಾರೆ. ಅಲ್ಲದೆ, ತೆಗೆದುಕೊಂಡ ತೀರ್ಮಾನಗಳ ಸುಸೂತ್ರ ಜಾರಿಗೆ ಹಿರಿಯ ನಾಯಕರಿಬ್ಬರನ್ನು ರಾಜ್ಯಕ್ಕೆ ಕಳುಹಿಸುವ ಸಂಭವವಿದ್ದು, ಮಿಷನ್​ 150 ಗಂಭೀರವಾಗಿ ಪರಿಗಣಿಸಿದ್ದಾರೆ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net