

ಬೆಂಗಳೂರು: ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳಿಂದ ಕರ್ನಾಟಕ ಬಂದ್ಗೆ ಕರೆ ನೀಡಿವೆ. ಆದರೆ ವಿವಿಧ ಜಿಲ್ಲೆಗಳಲ್ಲಿ ಬಂದ್ಗೆ ನೀರಸ ಪ್ರತಿಕ್ರಿಯೆ ಕಂಡುಬಂದಿದೆ.
ಮಂಗಳೂರಿನಲ್ಲಿ ಕೆಲ ಕಿಡಿಗೇಡಿಗಳು ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಬಸ್ನ ಗಾಜುಗಳು ಒಡೆದುಹೋಗಿವೆ. ಇದು ಆಂಧ್ರಪ್ರದೇಶಕ್ಕೆ ಬಸ್ ಸೇರಿದ್ದು. ಇದು ತಿರುಪತಿಯಿಂದ ಆಗಮಿಸಿತ್ತು. ಬೆಳಗ್ಗೆ 5.30ರ ಸುಮಾರಿಗೆ ಕಲ್ಲು ತೂರಾಟ ನಡೆಸಲಾಗಿದೆ.
ಉಳಿದಂತೆ ಬೆಳಗಾವಿ, ಹುಬ್ಬಳ್ಳಿ, ದಾವಣೆಗೆರೆ, ಕೊಡಗು, ಚಿಕ್ಕಮಗಳೂರು, ಸೇರಿ ವಿವಿಧ ಜಿಲ್ಲೆಗಳಲ್ಲಿ ಬಂದ್ ಬಿಸಿ ತಟ್ಟಿಲ್ಲ. ಜನ ಜೀವನ ಮತ್ತು ವಾಹನಗಳ ಓಡಾಟ ಎಂದಿನಂತೆ ನಡೆದಿದೆ.
ಬೆಳಗಾವಿಯಲ್ಲಿ ಬಂದಿಗಿಲ್ಲ ಬೆಂಬಲ. ಯಾವುದೇ ಸಂಘಟನೆಗಳು ಬಂದ್ಗೆ ಬೆಂಬಲ ನೀಡಿಲ್ಲ. ಹಾಗಾಗಿ ಎಂದಿನಂತೆ ಜನಜೀವನ ನಡೆದಿದೆ. ಬಸ್, ಆಟೋ, ಖಾಸಗಿ ವಾಹನಗಳ ಸಂಚಾರ ಸಾಮಾನ್ಯವಾಗಿದೆ. ಗೋವಾ, ಮಹಾರಾಷ್ಟ್ರ, ರಾಜ್ಯದ ನಾನಾ ಕಡೆ ಸರ್ಕಾರಿ ಬಸ್ ಸಂಚಾರ ಸಾಮಾನ್ಯವಾಗಿತ್ತು. ಕುಂದಾನಗರಿಯಲ್ಲಿ ಅಂಗಡಿ, ಹೋಟೆಲ್ ವ್ಯಾಪಾರ ವಹಿವಾಟು ಎಂದಿನಂತೆ ಕಾರ್ಯನಿರ್ವಹಣೆ ನಡೆದಿವೆ.
ಕೋಲಾರದಲ್ಲಿ ಬಂದ್ಗೆ ಬೆಂಬಲ ವ್ಯಕ್ತವಾಗಿಲ್ಲ. ಸಾಂಕೇತಿಕ ಪ್ರತಿಭಟನೆ ಹಾಗೂ ನೈತಿಕ ಬೆಂಬಲ ನೀಡಲಾಗುವುದು ಎಂದು ಕೆಲ ಸಂಘಟನೆಗಳು ತಿಳಿಸಿವೆ. ಜಿಲ್ಲೆಯಲ್ಲಿ ಎಂದಿನಂತೆ ಕಾರ್ಯ ನಿರ್ವಹಿಸಲಿರುವ ಶಾಲಾ ಕಾಲೇಜು, ಸಂಚಾರ ವ್ಯವಸ್ಥೆ, ಹಾಗೂ ಅಂಗಡಿ ಹೋಟೆಲ್ಗಳು,
ಹುಬ್ಬಳ್ಳಿಯಲ್ಲಿ ಕರ್ನಾಟಕ ಬಂದ್ಗೆ ಸಂಘಟನೆಗಳು ಬೆಂಬಲ ನೀಡಿಲ್ಲ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬಂದ್ಗೆ ನೀರಸ ಪ್ರತಿಕ್ರಿಯೆ ಕಂಡುಬಂದಿದೆ. ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಿರುವ ಸಂಗ್ರಾಮ ಸೇನೆ ಕಾರ್ಯಕರ್ತರು.
ಕನ್ನಡ ಪರ ಸಂಘಟನೆಗಳ ಕರೆಗೆ ಮೈಸೂರು ಕೂಡ ಓಗೊಟ್ಟಿಲ್ಲ. ಸಾಂಸ್ಕೃತಿಕ ನಗರಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗ್ರಾಮಾಂತರ, ನಗರ ಸಾರಿಗೆ ಬಸ್ ಸೇವೆಯಲ್ಲಿ ಯಾವುದೇ ವ್ಯತ್ಯಯ ಇಲ್ಲ. ಹಾಲು, ಪತ್ರಿಕೆ, ತರಕಾರಿ, ಬೀದಿಬದಿ ವ್ಯಾಪಾರ, ಎಪಿಎಂಸಿ, ಹಾಪ್‌ಕಾಮ್ಸ್ ಸೇರಿದಂತೆ ಯಾವುದೇ ವಟಿವಾಟುಗಳಿಗೂ ಅಡ್ಡಿ ಇಲ್ಲ. ಕೆಲ ಸಂಘಟನೆಗಳಿಂದ ಸಾಂಕೇತಿಕ ಪ್ರತಿಭಟನೆ ಸಾಧ್ಯತೆ ಇದೆ.