ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರೇ ನಿರ್ವಹಿಸುವ ಕೆಫೆ ಸಂಜೀವಿನಿ ಆರಂಭ, ಇದರ ಗುರಿಯೇನು?

cafe
Published on

ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯ ಆಹಾರವನ್ನು ಶುಚಿ-ರುಚಿಯಾಗಿ ಕೈಗೆಟುಕುವ ದರದಲ್ಲಿ ಒದಗಿಸುವ ಸದುದ್ದೇಶದಿಂದ ಮಹಿಳೆಯರೇ ನಡೆಸುವ ಕೆಫೆ ಸಂಜೀವಿನಿ ಕ್ಯಾಂಟೀನ್‍ಗಳನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಣೆ ಮಾಡಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ 2024-25ನೇ ಸಾಲಿನ ಬಜೆಟ್ ಮಂಡನೆ ಮಾಡಿದ ಅವರು, ಮಹಿಳೆಯರ ಸ್ವಾವಲಂಬನೆ ಮತ್ತು ಸಬಲೀಕರಣಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ ಕೆಫೆ ಸಂಜೀವಿನಿ ಸ್ಥಾಪನೆಗಾಗಿ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ 7.50 ಕೋಟಿ ರೂ. ವೆಚ್ಚ ಮಾಡಿ 50 ಕೆಫೆಗಳನ್ನು ಸ್ಥಾಪನೆ ಮಾಡಲಾಗುವುದೆಂದು ಆಶ್ವಾಸನೆ ನೀಡಿದರು.

ಈ ಕೆಫೆ ಸಂಜೀವಿನಿ ಸ್ಥಳೀಯ ಮಹಿಳೆಯರಿಗೆ ಉದ್ಯೋಗ ನೀಡುವ ಗುರಿಯೊಂದಿಗೆ, ಸ್ಥಳೀಯ ಆಹಾರವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದಕ್ಕೆ ವ್ಯತಿರಿಕ್ತವಾಗಿ ಇಂದಿರಾ ಕ್ಯಾಂಟೀನ್ಸ್ ಅಥವಾ ನಮ್ಮ ಕ್ಯಾಂಟೀನ್‌ನಲ್ಲಿ ನಾಗರಿಕರಿಗೆ ಕಡಿಮೆ ದರದಲ್ಲಿ ತಿಂಡಿ ಮತ್ತು ಊಟ ವಿತರಿಸಲಾಗುತ್ತದೆ.

ಕಾಫಿ ಮಂಡಳಿಯ ಸಹಭಾಗಿತ್ವದಲ್ಲಿ ಸ್ವಸಹಾಯ ಗುಂಪುಗಳ ಸದಸ್ಯರಾಗಿರುವ ಒಂದು ಲಕ್ಷ ಮಹಿಳೆಯರಿಗೆ ಕಾಫಿ ಉದ್ಯಮಿಗಳಾಗಲು ತರಬೇತಿ ನೀಡಲಾಗುವುದು. 2500 ಕಾಫಿ ಕಿಯೋನಿಕ್ಸ್‍ಗಳನ್ನ 25 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಿ ಇದರ ಸಂಪೂರ್ಣ ನಿರ್ವಹಣೆಯನ್ನು ಮಹಿಳೆಯರೇ ಮಾಡಲಿದ್ದಾರೆ ಎಂದರು.

ವಿದ್ಯಾರ್ಥಿನಿಯರು ಮತ್ತು ಉದ್ಯೋಗಸ್ಥ ಮಹಿಳೆಯರಿಗೆ ಕೈಗೆಟುಕುವ ದರದಲ್ಲಿ ರಾತ್ರಿ ತಂಗುವ ವ್ಯವಸ್ಥೆಯನ್ನು ಐದು ನಗರಗಳಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಈ ವಸತಿ ವ್ಯವಸ್ಥೆಯನ್ನು ಮಹಿಳಾ ಸ್ವಸಹಾಯ ಗುಂಪುಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಿರ್ವಹಣೆ ಮಾಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net