

ಬೆಂಗಳೂರು: ಬಜೆಟ್ ಗಾತ್ರ ಕೇವಲ ನಾಲ್ಕು ಸಾವಿರ ಕೋಟಿ ರೂ. ಜಾಸ್ತಿ ಆಗಿದೆ. ಇದರಿಂದ ಅಭಿವೃದ್ಧಿ ಮಾಡುತ್ತೇವೆ ಎನ್ನುವುದು ಸಾಧ್ಯವಾ? ಇವರಿಗೆ ಸಂಪನ್ಮೂಲಗಳ ಕೊರತೆ ಇದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.
ಬಜೆಟ್ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಜಿಎಸ್ಟಿಯಿಂದ ಬರಬೇಕಿದ್ದ ಹಣ ನಮಗೆ ಬಂದಿಲ್ಲವೆಂದು ಅವರೇ ಒಪ್ಪಿಕೊಂಡಿದ್ದಾರೆ. 15ನೇ ಹಣಕಾಸು ಆಯೋಗ ಹಂಚಿಕೆ ಮಾಡಿದ ಪಾಲು ಸಹ ಬಂದಿಲ್ಲ. ಈ ಬಾರಿ 11,215 ಕೋಟಿ ರೂ. ನಮಗೆ ಖೋತ ಆಗಿದೆ ಎಂದು ತಿಳಿಸಿದರು.
ರಾಜ್ಯದ ಆಂತರಿಕ ಉತ್ಪನ್ನವೂ ಕಡಿಮೆ ಆಗಿದೆ. ಸಾರಿಗೆ, ಕೃಷಿ, ಕೈಗಾರಿಕೆಯಲ್ಲಿ ಜಿಡಿಪಿ ಇಳಿಕೆ ಆಗಿದೆ. ಕೃಷಿಗೆ ಆದ್ಯತೆ ಕೊಟ್ಟಿಲ್ಲ. ನೀರಾವರಿಗೆ ಏನು ಬಂದಿಲ್ಲ. 500 ಕೋಟಿ ರೂ. ಮಹದಾಯಿ ಹಾಗೂ 1500 ಕೋಟಿ ರೂ. ಎತ್ತಿನಹೊಳೆ ಯೋಜನೆಗೆ ನೀಡಿದ್ದಾರೆ. ಆದರೆ, ಅಪ್ಪರ್ ಕೃಷ್ಣಗೆ 40 ಸಾವಿರ ಕೋಟಿ ರೂ. ಬೇಕು. ಆದರೆ, ಇದರ ಬಗ್ಗೆ ಪ್ರಸ್ತಾಪವೇ ಇಲ್ಲವೆಂದರು.
ಯಡಿಯೂರಪ್ಪ ಬಜೆಟ್ ಮಂಡನೆ ಮಾಡುವಾಗ ಹಾಗೂ ಪ್ರಮಾಣ ವಚನ ಸ್ವೀಕಾರಿಸುವಾಗ ಹಸಿರು ಶಾಲು ಹಾಕ್ತಾರೆ. ಆದರೆ, ಹೇಳೋದು ಒಂದು ಮಾಡುವುದು ಒಂದು. ಶಾಲೂ ಹಾಕಿದ ತಕ್ಷಣ ರೈತ ಪರ ಅಲ್ಲ. ಮಹದಾಯಿ ನಮ್ಮ ಸಾಧನೆಯೆಂದು ಹೇಳ್ತಿದ್ದಾರೆ. ವಕೀಲರು ವಾದ ಮಾಡಿದ್ದು ನಮ್ಮ ಕಾಲದಲ್ಲಿ. ಪ್ರಧಾನಿ ಮೋದಿ ರಾಜ್ಯದ ನಿಯೋಗವನ್ನೂ ಸಹ ಪರಿಗಣಿಸಲಿಲ್ಲ ಎಂದು ತಿಳಿಸಿದರು.
ಈ ಬಜೆಟ್ನಲ್ಲಿ ಹೊಸ ಯೋಜನೆಗಳು ಯಾವುದು ಇಲ್ಲ. 20-21ರ ಹೊಸ ಘೋಷಣೆಗಳನ್ನು ಮಾಡಿದರೂ ಸ್ಪಷ್ಟತೆ ಇಲ್ಲ. ಎಲ್ಲವೂ ಗುಪ್ತವಾಗಿ ಇಟ್ಟಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು. (ದಿಗ್ವಿಜಯ ನ್ಯೂಸ್)