

ಬೆಂಗಳೂರು: ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಮಕ್ಕಳಿಗಾಗಿಯೇ ಇರುವ ಮುಂಗಡಪತ್ರ ಮಂಡನೆಯಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಮಂಡಿಸಿರುವ ಬಜೆಟ್ನಲ್ಲಿ ಇದು ಒಳಗೊಂಡಿದೆ.
ಇದರಂತೆ, ರಾಜ್ಯದಲ್ಲಿರುವ 18 ವರ್ಷದ ಕೆಳಗಿರುವ ಎಲ್ಲಾ ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆ ಅಡಕವಾಗಿದೆ. 2020-21ನೇ ಸಾಲಿನ ಆಯವ್ಯಯದಲ್ಲಿ 36,340 ಕೋಟಿ ರೂ.ಗಳ 279 ಕಾರ್ಯಕ್ರಮಗಳ ಪ್ರಸ್ತಾಪವಿದೆ. ಇದು ಒಟ್ಟಾರೆ ಆಯವ್ಯಯ ಗಾತ್ರದ 15.28 ರಷ್ಟು ಇದೆ ಎಂದು ಸಿಎಂ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ರಾಜ್ಯದಲ್ಲಿ ಏಳು ಹೊಸ ಬಾಲಮಂದಿರಗಳ ಸ್ಥಾಪನೆ. 5.67 ಕೋಟಿ ರೂ. ಅನುದಾನ ಮಿಸಲಿಡಲಾಗಿದೆ ಎಂದಿರುವ ಸರ್ಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿಯಲ್ಲಿ ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಸುಧಾರಣಾ ಸಂಸ್ಥೆಗಳ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಕೂಡ ಸಿದ್ಧವಾಗಿದೆ. ಇದಕ್ಕಾಗಿ ಐದು ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ.
ಇದೇ ರೀತಿ, ನೆರೆಹಾವಳಿಯಿಂದ ಹಾನಿಯಾದ 842 ಅಂಗನವಾಡಿ ಕೇಂದ್ರಗಳ ಪುನರ್ ನಿರ್ಮಾಣಕ್ಕೆ 138 ಕೋಟಿ ರೂಪಾಯಿ ಹಂಚಿಕೆ ಮಾಡಿರುವ ಮುಖ್ಯಮಂತ್ರಿ ಬಿಎಸ್ವೈ, ಬಾಲಮಂದಿರದಿಂದ 21 ವರ್ಷ ತುಂಬಿದ ನಂತರ ಬಿಡುಗಡೆ ಹೊಂದುವವರಿಗೆ ಜೀವನೋಪಾಯ ರೂಪಿಸಿಕೊಳ್ಳಲು “ಉಪಕಾರ” ಯೋಜನೆಯಡಿ ಮೂರು ವರ್ಷ ಅವಧಿಗೆ ಮಾಸಿಕ 5000 ರೂ. ಆರ್ಥಿಕ ನೆರವು; ಕೌಶಲ್ಯಾಭಿವೃದ್ಧಿ ತರಬೇತಿಗೆ ಕ್ರಮ ತೆಗೆದುಕೊಂಡು ಒಂದು ಕೋಟಿ ರೂ. ಅನುದಾನ ಹಂಚಿಕೆ ಮಾಡಿದ್ದಾರೆ.
ಅಂಗನವಾಡಿಗಳಿಗೆ ಪೌಷ್ಟಿಕ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವ ಮಹಿಳಾ ಪೂರಕ ಪೌಷ್ಟಿಕ ಉತ್ಪಾದನಾ ಕೇಂದ್ರಗಳ ಆಧುನೀಕರಣಕ್ಕೆ ಮಹಿಳಾ ಅಭಿವೃದ್ಧಿ ನಿಗಮದಿಂದ 20 ಲಕ್ಷ ರೂ. ವರೆಗೆ ಬಡ್ಡಿ ರಹಿತ ಕಿರು ಸಾಲ ಸೌಲಭ್ಯ. 20 ಕೋಟಿ ರೂ. ಅನುದಾನವನ್ನು ಸರ್ಕಾರ ಮೀಸಲಿಟ್ಟಿದೆ.