ಭೋವಿ ಜನಾಂಗಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಆಗ್ರಹ

udp-8-bhovi
Published on

ಉಡುಪಿ: ರಾಜ್ಯದ ಮೂಲ ನಿವಾಸಿಗಳಾದ ಭೋವಿ ಜನಾಂಗಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ನೀಡಬೇಕೆಂಬ ಸ್ಪಷ್ಟ ಆದೇಶವಿದ್ದರೂ ಕೂಡ ಅಧಿಕಾರಿಗಳು ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ. ಸಂವಿಧಾನ ಬದ್ಧವಾಗಿ ಬಂದಿರುವ ಹಕ್ಕನ್ನು ಕೇಳುತ್ತಿದ್ದು, ಮೀಸಲಾತಿ ಪಟ್ಟಿಯಲ್ಲಿರುವ ಜನಾಂಗಕ್ಕೆ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಕರ್ನಾಟಕ ಭೋವಿ ಸಮಾಜ ಸೇವಾ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಉದಯಕುಮಾರ್​ ಭೋವಿ ಒತ್ತಾಯಿಸಿದರು.

ಕರ್ನಾಟಕ ಭೋವಿ ಸಮಾಜ ಸೇವಾ ಸಂಘದ ವತಿಯಿಂದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿಯ 101 ಜಾತಿಗಳ ಪೈಕಿ ಕ್ರಮ ಸಂಖ್ಯೆ 23ರಲ್ಲಿ ಭೋವಿ ಜನಾಂಗದ ಬಗ್ಗೆ ಉಲ್ಲೇಖವಿದೆ. ಅದರಂತೆ 1977ರಿಂದ ನಾವು ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆಯುತ್ತಿದ್ದೇವೆ. ಆದರೆ, ಇತ್ತೀಚಿಗೆ ಕೆಲವು ವರ್ಷಗಳಿಂದ ನಮಗೆ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ. ಇದಕ್ಕೆ ಅಧಿಕಾರಿಗಳ ದ್ವಂದ್ವ ನಿಲುವೇ ಮುಖ್ಯ ಕಾರಣ ಎಂದು ಆರೋಪಿಸಿದರು.

ಅಧಿಕಾರಿಗಳು ಬೆಸ್ತರು ಹಾಗೂ ಗಂಗಮತಸ್ಥರಿಗೆ ನೀಡುವ ಪ್ರವರ್ಗ 1ರ ಪ್ರಮಾಣಪತ್ರವನ್ನು ನಮಗೆ ಒತ್ತಾಯಪೂರ್ವಕವಾಗಿ ನೀಡಲು ಪ್ರಯತ್ನ ಮಾಡುತ್ತಿದ್ದಾರೆ. ಸರ್ಕಾರದ ಸುತ್ತೋಲೆಗಳು ನಮ್ಮ ಪರವಾಗಿ ಬಂದರೂ ಕೂಡಾ ಅಧಿಕಾರಿಗಳು ಅದನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ವಡ್ಡ ಜನಾಂಗದವರು ಭೋವಿಗಳಲ್ಲ. ಅವರು ಬೊಯಿ ಎಂಬ ಹೆಸರನ್ನಿಟ್ಟು ಈಗ ಭೋವಿ ಅಂತ ಮಾಡಿಕೊಂಡಿದ್ದಾರೆ ಎಂದರು.

ಪ್ರತಿಭಟನೆಯಲ್ಲಿ ಮಾಜಿ ಅಧ್ಯಕ್ಷ ಚಂದ್ರಶೇಖರ ಬೋವಿ, ಕರ್ನಾಟಕ ಭೋವಿ ಸಮಾಜ ಸೇವಾ ಸಮಿತಿಯ ಕಾರ್ಯದರ್ಶಿ ಉಡುಪಿ ರತ್ನಾಕರ ಬೋವಿ, ಕರ್ನಾಟಕ ಭೋವಿ ಸಮಾಜ ಸೇವಾ ಸಮಿತಿ ಅಧ್ಯಕ್ಷ ಉಡುಪಿ ಲಕ್ಷ್ಮಣ ಬೋವಿ, ವಿಶ್ವ ಮಾನವ ಹಕ್ಕುಗಳ ಅಧ್ಯಕ್ಷ ಕೋಟ ದಿನೇಶ್​ ಗಾಣಿಗ, ಉಚ್ಚಪ್ಪ ಬೋವಿ, ಸದಾನಂದ ಬೋವಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net