ಕಿರುಸಾಲ ಕ್ಷೇತ್ರಕ್ಕೆ ಕರ್ನಾಟಕ ಬ್ಯಾಂಕ್: ಸ್ಯಾಟಿನ್ ಕ್ರೆಡಿಟ್‌ಕೇರ್ ಜತೆ ಒಪ್ಪಂದಕ್ಕೆ ಸಹಿ

karnataka bank
karnataka bank
Published on

ಬೆಂಗಳೂರು: ಗ್ರಾಮೀಣ ಮತ್ತು ಅರೆ ಪಟ್ಟಣ ಪ್ರದೇಶಗಳಲ್ಲಿರುವ ಸಣ್ಣ ಪ್ರಮಾಣದ ಮಹಿಳಾ ಉದ್ಯಮಿಗಳಿಗೆ ಕಿರುಸಾಲ ಯೋಜನೆಯನ್ನು ಕರ್ನಾಟಕ ಬ್ಯಾಂಕ್ ಆರಂಭಿಸಿದೆ.

ನೂರನೇ ವರ್ಷಾಚರಣೆಯ ಹೊಸ್ತಿಲಲ್ಲಿರುವ ಕರ್ನಾಟಕ ಬ್ಯಾಂಕ್ ಇದೇ ಮೊದಲ ಬಾರಿಗೆ ಕಿರು ಸಾಲ ಕ್ಷೇತ್ರಕ್ಕೆ ಕಾಲಿಡುತ್ತಿದೆ. ಇದಕ್ಕಾಗಿ ಬ್ಯಾಂಕಿಂಗ್‌ಯೇತರ ಹಣಕಾಸು ಸಂಸ್ಥೆಯಾದ ಸ್ಯಾಟಿನ್ ಕ್ರೆಡಿಟ್‌ಕೇರ್ ನೆಟ್‌ವರ್ಕ್ ಲಿಮಿಟೆಡ್ (ಎಸ್‌ಸಿಎನ್‌ಎಲ್) ಜತೆಗೆ ಸಹ ಸಾಲ ಒಪ್ಪಂದಕ್ಕೆ ಸಹಿ ಮಾಡಿದೆ.

ಬಸವನಗುಡಿ ಶಾಖೆಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಎಚ್. ಶ್ರೀಕೃಷ್ಣನ್ ಮತ್ತು ಸ್ಯಾಟಿನ್ ಕ್ರೆಡಿಟ್‌ಕೇರ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಚ್.ಪಿ. ಸಿಂಗ್ ಒಪ್ಪಂದಕ್ಕೆ ಪರಸ್ಪರ ಸಹಿ ಹಾಕಿದರು.

ಒಪ್ಪಂದದ ಕುರಿತು ಕರ್ನಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಎಚ್. ಶ್ರೀಕೃಷ್ಣನ್ ಮಾತನಾಡಿ, ಅರ್ಹ ಫಲಾನುಭವಿಗಳನ್ನು ಸ್ಯಾಟಿನ್ ಗುರುತಿಸಲಿದ್ದು, ಕರ್ನಾಟಕ ಬ್ಯಾಂಕ್ ತನ್ನ ಸಾಲ ನೀತಿಗೆ ಅನುಗುಣವಾಗಿ ಅವರಿಗೆ ಸಾಲವನ್ನು ಒದಗಿಸಲಿದೆ. ಸಾಲದ ಮರುಪಾವತಿ ಹೊಣೆಗಾರಿಕೆಯನ್ನೂ ಸ್ಯಾಟಿನ್ ನಿಭಾಯಿಸಲಿದೆ. ಯೂಬಿ ಪ್ಲಾಟ್‌ಫಾರಂ ಮೂಲಕ ಸಾಲ ಅನುಮೋದನೆ ಪ್ರಕ್ರಿಯೆ ನಡೆಯಲಿದೆ. ಒಪ್ಪಂದದಿಂದಾಗಿ ಗ್ರಾಮೀಣ ಮತ್ತು ಅರೆಪಟ್ಟಣ ಪ್ರದೇಶಗಳಲ್ಲಿ ಸಣ್ಣ ಸಾಲ ಸೌಲಭ್ಯ ಕ್ಷೇತ್ರದಲ್ಲಿ ಬ್ಯಾಂಕ್‌ನ ಉಪಸ್ಥಿತಿ ಬಲಿಷ್ಠಗೊಳ್ಳಲಿದೆ. ಡಿಜಿಟಲ್ ಸಹಸಾಲ ಪಾಲುದಾರಿಕೆ ಸಾಲ ಸೌಲಭ್ಯದ ಹಲವು ವಿಭಾಗಗಳ ಉಸ್ತುವಾರಿ ವಹಿಸುವುದರಿಂದ ಬ್ಯಾಂಕ್ ಹಣಕಾಸು ಸಬಲೀಕರಣ ಮತ್ತು ಆರ್ಥಿಕ ಸಮಗ್ರತೆಯತ್ತ ಗಮನ ಹರಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ಶೋಷಿತ ಮತ್ತು ದುರ್ಬಲ ವರ್ಗದ ಸಮುದಾಯಗಳಿಗೆ ಸಾಲ ಸುಲಭವಾಗಿ ದೊರೆಯುವಂತೆ ಮಾಡಲು ಬ್ಯಾಂಕ್ ಮತ್ತು ಎನ್‌ಬಿಎಫ್‌ಸಿಗಳ ನಡುವೆ ಸಹ ಸಾಲ ಒಪ್ಪಂದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿದೆ. ಇದರನ್ವಯ ಕರ್ನಾಟಕ ಬ್ಯಾಂಕ್ ಮತ್ತು ಸ್ಯಾಟಿನ್ ಕ್ರೆಡಿಟ್‌ಕೇರ್ ನಡುವೆ ಒಪ್ಪಂದ ಏರ್ಪಟ್ಟಿದ್ದು, ಬ್ಯಾಂಕಿನ ಯೂಬಿ ಪ್ಲಾಟ್‌ಫಾರಂ ಮೂಲಕ ಫಲಾನುಭವಿಗಳಿಗೆ ಸುಲಭವಾಗಿ ಸಾಲ ದೊರೆಯಲಿದೆ ಎಂದರು.

ಸ್ಯಾಟಿನ್ ಕ್ರೆಡಿಟ್‌ಕೇರ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಚ್.ಪಿ. ಸಿಂಗ್ ಮಾತನಾಡಿ, ದೇಶದ ಜಿಡಿಪಿಯಲ್ಲಿ ಗ್ರಾಮೀಣ ಭಾಗದ ಕೊಡುಗೆ ಮಹತ್ವದ್ದಾಗಿದೆ. ಕರ್ನಾಟಕ ಬ್ಯಾಂಕ್ ಜತೆಗಿನ ಒಪ್ಪಂದ ಎಸ್‌ಸಿಎನ್‌ಎಲ್‌ಗೆ ಮೈಲುಗಲ್ಲು. ನಮ್ಮ ಸಾಮರ್ಥ್ಯವನ್ನು ಬಳಸಿಕೊಂಡು ಗ್ರಾಮೀಣ ಮತ್ತು ಅರೆಪಟ್ಟಣ ಪ್ರದೇಶಗಳ ಮಹಿಳಾ ಉದ್ಯಮಿಗಳ ಸಬಲೀಕರಣಕ್ಕೆ ಮತ್ತು ತನ್ಮೂಲಕ ಸುಸ್ಥಿರ ಆರ್ಥಿಕ ಪ್ರಗತಿಗೆ ಕೊಡುಗೆ ನೀಡಲು ಸಾಧ್ಯವಾಗಲಿದೆ. ಸಹ ಸಾಲ ಸೌಲಭ್ಯ ಅನೇಕ ಅವಕಾಶಗಳ ಬಾಗಿಲುಗಳನ್ನು ತೆರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net