ಮಾದನಾಯಕನಹಳ್ಳಿಯಲ್ಲಿ ಕರ್ಣಾಟಕ ಬ್ಯಾಂಕ್

Karnataka Bank at Madanayakanahalli
Karnataka Bank at Madanayakanahalli
Published on

ಗ್ರಾಮದಲ್ಲಿ 913ನೇ ಶಾಖೆ ಉದ್ಘಾಟನೆ

ಗ್ರಾಹಕರ ಅಚ್ಚುಮೆಚ್ಚಿನ ಬ್ಯಾಂಕ್

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಕರ್ಣಾಟಕ ಬ್ಯಾಂಕ್ ದೇಶಾದ್ಯಂತ ಗುರುತಿಸಿಕೊಂಡಿದ್ದು, ಕನ್ನಡಿಗರ ಬ್ಯಾಂಕ್ ಆಗಿದೆ. ಇದು ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆಪಡುವ ಸಂಗತಿಯಾಗಿದೆ ಎಂದು ಕೌಶಲ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಡಿ.ಗೌಡ ತಿಳಿಸಿದರು.
ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿ ಮಾದನಾಯಕನಹಳ್ಳಿಯಲ್ಲಿ ಬ್ಯಾಂಕ್‌ನ 913ನೇ ಶಾಖೆ ಉದ್ಘಾಟಿಸಿ ಮಾತನಾಡಿ, ಬ್ಯಾಂಕ್ ಸೇವಾ ವಲಯದಲ್ಲಿ ಗ್ರಾಹಕರು ಅತ್ಯಂತ ಮುಖ್ಯವಾಗಿದ್ದಾರೆ. ರಾಜ್ಯಾದ್ಯಂತ ನೂರಾರು ರಾಷ್ಟ್ರೀಕೃತ ಬ್ಯಾಂಕ್‌ಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರತಿಯೊಬ್ಬರೂ ಬ್ಯಾಂಕ್‌ನಿಂದ ದೊರೆತ ಸೌಲಭ್ಯಗಳನ್ನು ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಎಚ್.ಶ್ರೀಕೃಷ್ಣನ್ ಮಾತನಾಡಿ, ಬ್ಯಾಂಕ್ ನಷ್ಟವಿಲ್ಲದೆ ಸಾವಿರಾರು ಕೋಟಿ ರೂ. ಲಾಭದಲ್ಲಿ ನಡೆಯುತ್ತಿದೆ. ಶತಮಾನದ ಅಂಚಿನಲ್ಲಿರುವ ಬ್ಯಾಂಕ್ ಗ್ರಾಹಕಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಬ್ಯಾಂಕ್‌ಗೆ ಗ್ರಾಹಕರು ದೇವರಿದ್ದಂತೆ, ಅವರನ್ನು ಗೌರವಿಸುವ ಕೆಲಸವನ್ನು ಸಿಬ್ಬಂದಿ ಮಾಡುತ್ತಿದ್ದಾರೆ ಎಂದರು.
ಜನರಿಗೆ ಕಡಿಮೆ ಬಡ್ಡಿದರದಲ್ಲಿ ಸಾಕಷ್ಟು ಸಾಲ ಸೌಲಭ್ಯ ನೀಡಲಾಗುತ್ತಿದೆ. ಸರ್ಕಾರದ ಸೇವೆಗಳನ್ನು ಒಳಗೊಂಡ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಕೆ ಮಾಡಿಕೊಂಡು ದೇಶಾದ್ಯಂತ ಕರ್ತವ್ಯ ನಿರ್ವಹಿಸುತ್ತಿದೆ. ಗ್ರಾಹಕರಿಗೆ ಕೇವಲ 300 ರೂ.ನಲ್ಲಿ 10 ಲಕ್ಷ ವಿಮಾ ಸೌಲಭ್ಯ ನೀಡಲಾಗುತ್ತಿದೆ ಎಂದು ತಿಳಿಸಿದರು.
1924ರ ಫೆಬ್ರವರಿ 18ರಂದು ಮಂಗಳೂರಿನಲ್ಲಿ ಆರಂಭಗೊಂಡ ಬ್ಯಾಂಕ್ ದೇಶದ 22 ರಾಜ್ಯ, 2 ಕೇಂದ್ರಾಡಳಿತ ಪ್ರದೇಶ ಸೇರಿ 913 ಶಾಖೆ ಹೊಂದಿದೆೆ. ಬ್ಯಾಂಕ್ 2.25 ಲಕ್ಷಕ್ಕೂ ಹೆಚ್ಚು ಷೇರುದಾರರು, 1.30 ಕೋಟಿಗೂ ಹೆಚ್ಚು ಗ್ರಾಹಕರು, ಎರಡೂವರೆ ಸಾವಿರ ಸಿಬ್ಬಂದಿ ಒಳಗೊಂಡಿದೆ. 1500ಕ್ಕೂ ಹೆಚ್ಚು ಎಟಿಎಂ ಕೇಂದ್ರ ಹಾಗೂ 2080 ವ್ಯವಹಾರ ಕೇಂದ್ರ ಒಳಗೊಂಡಿದೆ. ಇತ್ತೀಚೆಗೆ ವಾರ್ಷಿಕ ಸುಮಾರು 1.50 ಲಕ್ಷ ಕೋಟಿ ರೂ. ವ್ಯವಹಾರ ನಡೆಸುತ್ತಿದೆ. ಕಳೆದ ವರ್ಷ 1,179 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಈ ವರ್ಷ ಜೂನ್ ತ್ರೈಮಾಸಿಕ ಹಂತಕ್ಕೆ 371 ಕೋಟಿ ರೂ. ನಿವ್ವಳ ಲಾಭಗಳಿಸಿದೆ. ಗ್ರಾಹಕರಿಗೆ ಗೃಹಸಾಲ, ವಾಹನಸಾಲ, ಆಸ್ತಿ, ಬಂಗಾರ ಸಾಲ, ವೈಯಕ್ತಿಕ ಸಾಲ ಸೇರಿ ಸಾಕಷ್ಟು ಸೌಲಭ್ಯ ನೀಡಲಾಗುತ್ತಿದೆ ಎಂದು ಬೆಂಗಳೂರು ಪ್ರಾದೇಶಿಕ ಡೆಪ್ಯೂಟಿ ಜನರಲ್ ವ್ಯವಸ್ಥಾಪಕ ಬಿ.ನಾಗರಾಜ ಉಪಾಧ್ಯಾಯ ಮಾಹಿತಿ ನೀಡಿದರು.
2022ರಲ್ಲಿ 25ಕ್ಕೂ ಹೆಚ್ಚು ರಾಷ್ಟ್ರಪ್ರಶಸ್ತಿಯನ್ನು ಬ್ಯಾಂಕ್ ಪಡೆದುಕೊಂಡಿದೆ. ಸರ್ಕಾರದ ಚಲನ್‌ಗಳನ್ನು ಬ್ಯಾಂಕ್‌ನಲ್ಲಿ ಪಾವತಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಕೇಂದ್ರ ಸರ್ಕಾರದ ಸಾಕಷ್ಟು ಯೋಜನೆಗಳನ್ನು ಬ್ಯಾಂಕ್ ನೀಡುತ್ತಿದೆ ಎಂದರು.
ಆಲೂರು ಶಾಖೆ ವ್ಯವಸ್ಥಾಪಕ ಬಿ.ಎನ್.ವಿನಾಯಕ್, ಅಡಕಿಮಾರನಹಳ್ಳಿ ಶಾಖೆ ವ್ಯವಸ್ಥಾಪಕ ಕೃಷ್ಣಪ್ರಸಾದ್, ನೌಕರ ಶಿಬುದಾರ್, ಮುಖಂಡರಾದ ಗಂಗಣ್ಣ, ಅರಣ್‌ಕುಮಾರ್, ತಿಮ್ಮನರಸಯ್ಯ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net