ಕರ್ನಾಟಕ ಬ್ಯಾಂಕ್ ಸಾರ್ವಕಾಲಿಕ ದಾಖಲೆ

ರಾಘವೇಂದ್ರ ಎಸ್. ಭಟ್
ರಾಘವೇಂದ್ರ ಎಸ್. ಭಟ್
Published on

ಪ್ರಮುಖ ಮುಖ್ಯಾಂಶಗಳು

  • 418.95 ಕೋಟಿ ರೂ. ತ್ರೈಮಾಸಿಕ ನಿವ್ವಳ ಲಾಭ
  • 1,97,006.62 ಕೋಟಿ ರೂ. ಒಟ್ಟು ವ್ಯವಹಾರ
ಮಂಗಳೂರು: ಮಂಗಳೂರಿನಲ್ಲಿ ಬುಧವಾರ ನಡೆದ ಕರ್ನಾಟಕ ಬ್ಯಾಂಕಿನ ನಿರ್ದೇಶಕರ ಮಂಡಳಿಯ ಸಭೆಯಲ್ಲಿ 2026ರ ಜೂ. 30ಕ್ಕೆ ಕೊನೆಗೊಂಡ ತ್ರೈಮಾಸಿಕದ ಹಣಕಾಸು ಫಲಿತಾಂಶಗಳಿಗೆ ಮಂಡಳಿಯು ಅನುಮೋದನೆ ನೀಡಿದೆ.
ಬ್ಯಾಂಕ್‌ನ ಒಟ್ಟು ಠೇವಣಿಗಳು 2026ರ ಜೂ. 30ರ ವೇಳೆಗೆ 1,10,396.41 ಕೋಟಿಗಳಿಗೆ ತಲುಪಿದ್ದು, 2025ರ ಜೂ. 30ರಲ್ಲಿದ್ದ 1,03,242.17 ಕೋಟಿಗಳಿಗೆ ಹೋಲಿಸಿದರೆ ಶೇಕಡಾ 7ರಷ್ಟು ವಾರ್ಷಿಕ ಪ್ರಗತಿ ಸಾಧಿಸಲಾಗಿದೆ. ಹಾಗೆಯೇ ಚಿಲ್ಲರೆ ಅವಧಿ ಠೇವಣಿಗಳು 2025ರ ಜೂ. 30ರಲ್ಲಿದ್ದ 65,786.24 ಕೋಟಿಗಳಿಗೆ ಹೋಲಿಸಿದರೆ ಶೇಕಡಾ 6 ರಷ್ಟು ವಾರ್ಷಿಕ ಪ್ರಗತಿಯೊಂದಿಗೆ 69,410.29 ಕೋಟಿಗಳಿಗೆ ಏರಿಕೆಯಾಗಿವೆ.
ಒಟ್ಟು ಮುಂಗಡಗಳು 86,610.21 ಕೋಟಿಗಳಿಗೆ ತಲುಪಿದ್ದು, 2025ರ ಜೂ. 30ರಲ್ಲಿದ್ದ 74,267.02 ಕೋಟಿಗಳಿಗೆ ಹೋಲಿಸಿದರೆ ಶೇಕಡಾ 17ರಷ್ಟು ವಾರ್ಷಿಕ ಪ್ರಗತಿಯನ್ನು ದಾಖಲಿಸಿವೆ. ಬ್ಯಾಂಕ್‌ನ ನಿವ್ವಳ ಬಡ್ಡಿ ಮಾರ್ಜಿನ್ 2025ರ ಜೂ. 30ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿದ್ದ ಶೇ. 2.82ರಿಂದ 2026ರ ಜೂ. 30ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇ. 3.20ಕ್ಕೆ ಸುಧಾರಿಸಿದ್ದು, ವಾರ್ಷಿಕವಾಗಿ 38 ಬಿಬಿಎಸ್ ಏರಿಕೆಯನ್ನು ದಾಖಲಿಸಿದೆ.
2026ರ ಜೂ. 30ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ನಿವ್ವಳ ಲಾಭವು 418.95 ಕೋಟಿಗಳಾಗಿದ್ದು, 2025ರ ಜೂ. 30ಕ್ಕೆ ಕೊನೆಗೊಂಡ ತ್ರೈಮಾಸಿಕದ 292.40 ಕೋಟಿಗಳಿಗೆ ಹೋಲಿಸಿದರೆ ಶೇಕಡಾ 43ರಷ್ಟು ಏರಿಕೆಯಾಗಿದೆ. ಹಾಗೆಯೇ 2026ರ ಜೂ. 30ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 1,97,006.62 ಕೋಟಿ ರೂ. ಒಟ್ಟು ವ್ಯವಹಾರ ದಾಖಲಾಗಿದೆ ಎಂದು ಮಂಗಳೂರಿನ ಕರ್ನಾಟಕ ಬ್ಯಾಂಕ್‌ನ ಮುಖ್ಯ ಕಚೇರಿಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಾಘವೇಂದ್ರ ಎಸ್. ಭಟ್ ಅವರು ಹೇಳಿದರು.

"ಸುಸ್ಥಿರ ಪ್ರಗತಿ, ವಿವೇಚನಾಯುಕ್ತ ಹಣಕಾಸು ನಿರ್ವಹಣೆ ಮತ್ತು ಗ್ರಾಹಕ ಕೇಂದ್ರಿತ ಬ್ಯಾಂಕಿಂಗ್‌ಗೆ ಬ್ಯಾಂಕ್‌ನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಅಧ್ಯಕ್ಷರು ಮತ್ತು ಮಂಡಳಿಯ ನಿರಂತರ ಬೆಂಬಲ ಹಾಗೂ ಮಾರ್ಗದರ್ಶನ, ಗ್ರಾಹಕರ ನಂಬಿಕೆ, ಶೇರುದಾರರ ವಿಶ್ವಾಸ ಮತ್ತು ಉದ್ಯೋಗಿಗಳ ಶ್ರಮವೇ ನಮ್ಮ ಈ ಪ್ರಗತಿಗೆ ಮೂಲ ಕಾರಣವಾಗಿದೆ. ನಮ್ಮ ಡಿಜಿಟಲ್ ರೂಪಾಂತರದ ಪ್ರಯಾಣವು ಮುಂದುವರಿಯುತ್ತಿದೆ. ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುತ್ತಿದ್ದೇವೆ."

— ರಾಘವೇಂದ್ರ ಎಸ್. ಭಟ್, ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ, ಕರ್ನಾಟಕ ಬ್ಯಾಂಕ್

"ನಮ್ಮ ನಿರಂತರ ಪ್ರಗತಿಯು ಸಂಸ್ಥೆಯಾದ್ಯಂತ ನಮ್ಮ ಉದ್ಯೋಗಿಗಳ ಶಿಸ್ತಿನ ಅನುಷ್ಠಾನ, ಬಲವಾದ ಕಾರ್ಯಾಚರಣೆಯ ಚೌಕಟ್ಟು ಮತ್ತು ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ನಮ್ಮ ಗ್ರಾಹಕರು ಮತ್ತು ಪಾಲುದಾರರಿಗೆ ಹೆಚ್ಚಿನ ಮೌಲ್ಯವನ್ನು ಸೃಷ್ಟಿಸುವ ಜೊತೆಗೆ ನಿರಂತರ ಅತ್ಯುತ್ತಮ ಸಾಧನೆ ನೀಡುವತ್ತ ನಾವು ಗಮನ ಹರಿಸಿದ್ದೇವೆ. ನಾವು ನಮ್ಮ ಡಿಜಿಟಲ್ ರೂಪಾಂತರದ ಪ್ರಯಾಣವನ್ನು ಮುನ್ನಡೆಸುತ್ತಿರುವಾಗ, ಪ್ರಕ್ರಿಯೆಗಳನ್ನು ಸರಳೀಗೊಳಿಸಲು, ಗ್ರಾಹಕರ ಅನುಕೂಲತೆಯನ್ನು ಹೆಚ್ಚಿಸಲು ಮತ್ತು ಎಲ್ಲಾ ಸೇವಾ ಮಾಧ್ಯಮಗಳಲ್ಲಿ ಸೇವಾ ವಿತರಣೆಯನ್ನು ಸುಧಾರಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದೇವೆ."

— ಬಿಜಿ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕಿ, ಕರ್ನಾಟಕ ಬ್ಯಾಂಕ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net