

ಮಂಗಳೂರು : ಕರ್ಣಾಟಕ ಬ್ಯಾಂಕ್ ಪ್ರಸಕ್ತ ಆರ್ಥಿಕ ವರ್ಷ ಸಾಲಿನ 3ನೇ ತ್ರೈಮಾಸಿಕ ಅಂತ್ಯ (9 ತಿಂಗಳ ಅವಧಿ) ಕ್ಕೆ ಸಾರ್ವಕಾಲಿಕ ದಾಖಲೆಯ 1,77,978.27 ಕೋಟಿ ರೂ. ಒಟ್ಟು ವ್ಯವಹಾರ ದಾಖಲಿಸಿದೆ. ಈ ಅವಧಿಯಲ್ಲಿ 1,020 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದ್ದು ಬ್ಯಾಂಕ್‌ನ ಪ್ರಗತಿ ಗಮನಾರ್ಹವಾಗಿದೆ.
ಮಂಗಳೂರಿನಲ್ಲಿ ಶುಕ್ರವಾರ ನಡೆದ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ತ್ರೈಮಾಸಿಕ ಮತ್ತು 9 ತಿಂಗಳ ಅವಧಿಯ ಆರ್ಥಿಕ ಫಲಿತಾಂಶಗಳಿಗೆ ಅನುಮೋದನೆ ನೀಡಲಾಯಿತು.
ತ್ರೈಮಾಸಿಕ ಅವಧಿ ಅಂತ್ಯಕ್ಕೆ ಬ್ಯಾಂಕ್ 283.60 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದ್ದು ಹಿಂದಿನ ವರ್ಷದ ಇದೇ ಅವಧಿಯಲ್ಲಿ 331.08 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. 9 ತಿಂಗಳ ಅವಧಿಯಲ್ಲಿ 1020 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದ್ದು ಹಿಂದಿನ ವರ್ಷದ ಇದೇ ಅವಧಿಯಲ್ಲಿ 1032.04 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಹಿಂದಿನ ವರ್ಷದ ಸಾಧನೆಗೆ ಹೋಲಿಸಿದರೆ ಶೇ. 1.17 ರಷ್ಟು ಅಲ್ಪ ಕುಸಿತ ಕಂಡಿದೆ. ಹೂಡಿಕೆಯ ಆದಾಯದ ಆಧಾರದ ಮೇಲೆ ಆರ್‌ಬಿಐ ಮುಖ್ಯ ನಿರ್ದೇಶನ ಹಾಗೂ ಲೆಕ್ಕಪತ್ರದಲ್ಲಿ ಬದಲಾವಣೆ ಕುಸಿತಕ್ಕೆ ಪ್ರಾಥಮಿಕ ಕಾರಣವಾಗಿದೆ.
ಬ್ಯಾಂಕಿನ ಒಟ್ಟು ಮುಂಗಡ 77,859.75 ಕೋಟಿ ರೂ. ಇದ್ದು ಶೇ.11.64 ಬೆಳವಣಿಗೆ ದಾಖಲಿಸಿದೆ. ಒಟ್ಟು ಠೇವಣಿ 1,00,118.52 ಕೋಟಿ ರೂ. ಇದ್ದು ಶೇ. 8.59 ಬೆಳವಣಿಗೆ ದಾಖಲಿಸಿದೆ.
ಫಲಿತಾಂಶಗಳನ್ನು ಪ್ರಕಟಿಸಿದ ಬ್ಯಾಂಕಿನ ಆಡಳಿತ ನಿರ್ದೇಶಕ ಮತ್ತು ಸಿಇಒ ಶ್ರೀಕೃಷ್ಣನ್.ಎಚ್. ಮಾತನಾಡಿ ‘ ಕರ್ಣಾಟಕ ಬ್ಯಾಂಕ್ ಚಿಲ್ಲರೆ ಮತ್ತು ಮಧ್ಯಮ-ಕಾರ್ಪೊರೇಟ್ ವಿಭಾಗಗಳಲ್ಲಿನ ಬೆಳವಣಿಗೆಯೊಂದಿಗೆ ಆರಂಭಿಸಿದ ವಿವಿಧ ಪರಿವರ್ತನಾ ಕ್ರಮಗಳಿಂದ ಪ್ರಯೋಜನಗಳನ್ನು ಪಡೆದುಕೊಳ್ಳಲು ಪ್ರಾರಂಭಿಸಿದೆ. ಬ್ಯಾಂಕ್‌ನ ಶಾಖೆಗಳಲ್ಲಿ ಸುಧಾರಿತ ಗುಣಮಟ್ಟ, ಮಾರಾಟ ಮತ್ತು ಡಿಜಿಟಲ್ ಚಾನೆಲ್‌ಗಳಿಂದ ಹೆಚ್ಚಿದ ವ್ಯವಹಾರ ಮುಂದುವರಿಯುವುದರೊಂದಿಗೆ ನಿರ್ಣಾಯಕ ಬೆಳವಣಿಗೆಯ ಫಲಿತಾಂಶಗಳ ಬಗ್ಗೆ ನಮಗೆ ವಿಶ್ವಾಸವಿದೆ ಎಂದರು.
ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್ ಸವಾಲಿನ ಸ್ಥೂಲ ಆರ್ಥಿಕ ವಾತಾವರಣದ ಹೊರತಾಗಿಯೂ ಕರ್ಣಾಟಕ ಬ್ಯಾಂಕ್ ಗುಣಮಟ್ಟ ಕಾಪಾಡಿಕೊಳ್ಳಲು ಗಮನಹರಿಸಿದೆ. ನಿರಂತರ ಬೆಳವಣಿಗೆಗೆ ನಾವು ಸರಿಯಾದ ಹಾದಿಯಲ್ಲಿದ್ದೇವೆ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತಿದೆ. ಡಿಜಿಟಲ್ ರೂಪಾಂತರ ಮತ್ತು ತಂತ್ರಜ್ಞಾನ-ಚಾಲಿತ ಪರಿಹಾರಗಳಿಗೆ ನಮ್ಮ ಬದ್ಧತೆಯು ಕಾರ್ಯಾಚರಣೆಯ ದಕ್ಷತೆಯನ್ನು ಬಲಪಡಿಸಿದೆ ಎಂದರು.